ಬೆಂಗಳೂರು: ಮಹದಾಯಿ, ಕಳಸಾ- ಬಂಡೂರಿ ಯೋಜನೆ ವಿಚಾರದಲ್ಲಿ ಕರ್ನಾಟಕದ ಪಾಲಿಗೆ ಕಾಂಗ್ರೆಸ್ ನಿಜವಾದ ದೋಷಿ ಮತ್ತು ಖಳನಾಯಕನಾಗಿದ್ದು, ಈಗ ಗೊಂದಲ ಸೃಷ್ಟಿಸಿ ಜನರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ರಾಜ್ಯ ಚುನಾವಣ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಮಹದಾಯಿ ನೀರು ತರಲು ಏನೂ ಕ್ರಮ ಕೈಗೊಳ್ಳಲಿಲ್ಲ. ಇದೀಗ ಬಿಜೆಪಿ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿ ಕರ್ನಾಟಕಕ್ಕೆ ಮಹದಾಯಿ ನೀರು ಬಿಡಲು ಗೋವಾ ಮುಖ್ಯಮಂತ್ರಿಗಳನ್ನು ಒಪ್ಪಿಸಿದ ಬಳಿಕ ಕಾಂಗ್ರೆಸ್ ಆತಂಕಕ್ಕೊಳಗಾಗಿ ಅನಗತ್ಯ ವಿವಾದ ಸೃಷ್ಟಿಸುತ್ತಿದೆ ಎಂದು ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಏನೇ ಆರೋಪಗಳನ್ನು ಮಾಡಲಿ, ಗೋವಾ ಮುಖ್ಯ ಮಂತ್ರಿ ಮನೋಹರ್ ಪಾರೀಕರ್ ಅವರ ಕ್ರಮವನ್ನು ರಾಜ್ಯದ ಜನ ಸ್ವಾಗತಿಸಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೆ ಈ ಕೆಲಸ ವೇಗ ಪಡೆಯುತ್ತದೆ ಎಂದು ನಂಬಿದ್ದಾರೆ ಎಂದು ಹೇಳಿದರು.
ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಜತೆಗೆ ಜೆಡಿಎಸ್ ವಿರುದ್ಧವೂ ಕಿಡಿ ಕಾರಿದ ಜಾವಡೇಕರ್, ರಾಜ್ಯ ಮತ್ತು ಕೇಂದ್ರ ದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ರಾಜ್ಯಕ್ಕೆ ಮಹದಾಯಿ ನೀರು ತರಲು ಏನೂ ಮಾಡಲಿಲ್ಲ.
ಎಚ್.ಡಿ.ದೇವೇಗೌಡ ಪ್ರಧಾನಿಯಾಗಿದ್ದಾಗಲೂ ಅವರಿಂದ ಆಗಲಿಲ್ಲ. ಆದರೆ, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಯಾಗಿದ್ದಾಗ 2001ರಲ್ಲಿ ಯೋಜನೆಗೆ ತಾತ್ವಿಕ ಅನು ಮೋದನೆ ನೀಡಿದರು. 2007ರಲ್ಲಿ ಯಡಿಯೂರಪ್ಪ ಉಪಮುಖ್ಯಮಂತ್ರಿ ಮತ್ತು ಕೆ.ಎಸ್.ಈಶ್ವರಪ್ಪ ಅವರು ಜಲ ಸಂಪನ್ಮೂಲ ಸಚಿವರಾಗಿದ್ದಾಗ ಕಾಲುವೆ ಕಾಮಗಾರಿಗೆ ಚಾಲನೆ ನೀಡಿದರು. ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಆ ಕಾರ್ಯಕ್ರಮಕ್ಕೂ ಹೋಗಿರಲಿಲ್ಲ. ಈಗ ಬಿಜೆಪಿ ನೀರು ಬಿಡುಗಡೆಗೆ ವೇದಿಕೆ ಸಿದ್ಧಪಡಿಸಿದರೆ ಅದರ ಬಗ್ಗೆ ಟೀಕೆ ವ್ಯಕ್ತ ಪಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಇಬ್ಬಂದಿ ಧೋರಣೆ
ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಂದಿ ಧೋರಣೆ ಅನುಸರಿಸುತ್ತಿದೆ. ಇಲ್ಲಿ ನೀರು ಬೇಕು ಎಂದು ಹೇಳಿದರೆ ಗೋವಾದಲ್ಲಿ ಕರ್ನಾಟಕಕ್ಕೆ ನೀರು ಬಿಡಲು ವಿರೋಧ ವ್ಯಕ್ತಪಡಿಸುತ್ತಿದೆ. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರೇ 2012ರ ಗೋವಾ ಚುನಾವಣೆ ವೇಳೆ ಮಹದಾಯಿಯಿಂದ ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆ ಮೂಲಕ ಅವರು ಕರ್ನಾಟಕ ಮತ್ತು ರೈತರಿಗೆ ವಂಚಿಸಿದರು. ಈಗ ಮಾನವೀಯತೆ ಆಧಾರದ ಮೇಲೆ ಗೋವಾ ಸಿಎಂ ನೀರು ಬಿಡುಗಡೆಗೆ ಸಿದ್ಧ ಎಂದರೆ ಟೀಕಿಸುತ್ತಿದ್ದಾರೆ. ಆದರೆ ಇದನ್ನು ನಂಬಲು ರಾಜ್ಯದ ಜನ ಮೂರ್ಖರಲ್ಲ ಎಂದರು.
ಪ್ರಶ್ನೆಗಳಿಗೆ ಉತ್ತರಿಸಲು ನಕಾರ
ಮಹದಾಯಿ ವಿವಾದ ಕುರಿತಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಜಾವಡೇಕರ್, ನಾನು ಹೇಳಿಕೆ ನೀಡಲೆಂದು ಮಾಧ್ಯಮದವರನ್ನು ಆಹ್ವಾನಿಸಿದ್ದೇನೆ. ಹೇಳಿಕೆ ನೀಡಿದ್ದೇನೆ. ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಹೇಳಿ ಪತ್ರಿಕಾಗೋಷ್ಠಿ ಮುಗಿಸಿದರು.