Advertisement

ವಿಜಯೇಂದ್ರ ಮುಂದೇನು? ಶುರುವಾಗಿದೆ ಲೆಕ್ಕಾಚಾರ ,ಸಿಗಲಿದೆಯೇ ಪ್ರ.ಕಾರ್ಯದರ್ಶಿ ಹುದ್ದೆ ?

08:28 AM May 26, 2022 | Team Udayavani |

ಬೆಂಗಳೂರು: ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಟಿಕೆಟ್‌ ವಂಚಿತ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮುಂದೆ ಪಕ್ಷದಲ್ಲಿ ಯಾವ ಹುದ್ದೆ ಸಿಗಲಿದೆ ಎಂಬ ಚರ್ಚೆಗಳು ಶುರುವಾಗಿವೆ.

Advertisement

ಪ್ರಧಾನ ಕಾರ್ಯದರ್ಶಿ ಹುದ್ದೆ?
ವಿಜಯೇಂದ್ರರು ಈಗ ಹೊಂದಿರುವ ರಾಜ್ಯ ಉಪಾಧ್ಯಕ್ಷ ಹುದ್ದೆಗೆ ಮಹತ್ವ ಇಲ್ಲ ಎಂಬ ಅಭಿಪ್ರಾಯ ಇದೆ. ಸದ್ಯ 7-8 ಮಂದಿ ಉಪಾಧ್ಯಕ್ಷರಿದ್ದಾರೆ. ಅವರಿಗೆ ಪಕ್ಷದಲ್ಲಿ ನಿರ್ದಿಷ್ಟ ಜವಾಬ್ದಾರಿ ಇಲ್ಲದ ಕಾರಣ ದುಡಿಯಲು ಅವಕಾಶವಿಲ್ಲ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ವಿಜಯೇಂದ್ರರು ಹೆಚ್ಚಿನ ಪ್ರಾತಿನಿಧ್ಯವಿರುವ ಪ್ರಧಾನ ಕಾರ್ಯದರ್ಶಿ ಹುದ್ದೆ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಯಾವ ಕ್ಷೇತ್ರದಿಂದ ಟಿಕೆಟ್‌?
ವಿಜಯೇಂದ್ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆಂಬ ಕಾರಣಕ್ಕಾಗಿಯೇ ವರಿಷ್ಠರು ಅವರಿಗೆ ಪರಿಷತ್‌ ಟಿಕೆಟ್‌ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಇದು ನಿಜವಾಗಿದ್ದರೆ, ಯಾವ ಕ್ಷೇತ್ರದಿಂದ ಟಿಕೆಟ್‌ ಸಿಗಬಹುದು ಎಂಬ ಚರ್ಚೆ ಈಗಲೇ ಆರಂಭವಾಗಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ವಿಜಯೇಂದ್ರ ಎಲ್ಲ ರೀತಿಯಿಂದಲೂ ಸಿದ್ಧರಾಗಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಟಿಕೆಟ್‌ ನಿರಾಕರಿಸಲಾಗಿತ್ತು. ಈಗಲೂ ಅಲ್ಲಿಂದ ಇವರಿಗೆ ಬೇಡಿಕೆ ಇದೆ. ಇನ್ನೊಂದು ಮೂಲದ ಪ್ರಕಾರ ಯಡಿಯೂರಪ್ಪ ಪ್ರತಿನಿಧಿಸುತ್ತಿರುವ ಶಿವಮೊಗ್ಗದ ಶಿಕಾರಿಪುರದಿಂದಲೇ ಕಣಕ್ಕಿಳಿಯುವಂತೆ ವಿಜಯೇಂದ್ರರಿಗೆ ವರಿಷ್ಠರು ಸೂಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿಜಯೇಂದ್ರರಿಗೆ ಟಿಕೆಟ್‌ ತಪ್ಪಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಮುಂದೆ ಅವರಿಗೆ ಬೇರೆ ಅವಕಾಶಗಳಿವೆ. ಮುಂದಿನ ಬಾರಿ ಸ್ಪರ್ಧೆ ಬಗ್ಗೆ ಈಗ ಚರ್ಚೆ ಬೇಕಿಲ್ಲ
-ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ

Advertisement

ಪರಿಷತ್‌ಗೆ ಟಿಕೆಟ್‌ ಸಿಗದಿದ್ದಕ್ಕೆ ಕೆಲವರಿಗೆ ಬೇಸರ ಆಗಿರುವುದು ಸತ್ಯ. ಸದ್ಯ ನಾನು ರಾಜಕಾರಣದಲ್ಲಿ ಅಂಬೆಗಾಲಿಡುತ್ತಿದ್ದೇನೆ. ಮುಂದೆ ಪಕ್ಷ ಉತ್ತಮ ಜವಾಬ್ದಾರಿ ನೀಡಲಿದೆ.
-ಬಿ. ವೈ. ವಿಜಯೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ


-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next