ಶಿವಮೊಗ್ಗ: ಶಿರಾ ಮತ್ತೆ ಆರ್ ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ನೂರಕ್ಕೆ ನೂರು ಗೆಲ್ಲುತ್ತಾರೆ. ದೊಡ್ಡ ಅಂತರದಿಂದ ಗೆಲ್ಲುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಶಿಕಾರಿಪುರದಲ್ಲಿ ಮಾತನಾಡಿದ ಅವರು, ಮೂರು ದಿನದಿಂದ ವಿಜಯೇಂದ್ರ ಶಿರಾದಲ್ಲಿ ಇದ್ದಾರೆ. ವಿಜಯೇಂದ್ರ ಮುಂದಾಳತ್ವದಲ್ಲಿ ಶಿರಾದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ. ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಠೇವಣಿ ಪಡೆಯುವುದಿಲ್ಲ ಎಂದುಕೊಂಡಿದ್ದೆವು. ಇಂದಿನ ಸ್ಥಿತಿಯನ್ನು ನೋಡಿದರೆ ಶಿರಾದಲ್ಲಿಯೂ ನಾವು ಗೆಲ್ಲುತ್ತೇವೆ ಎಂದರು.
ಮಲೆನಾಡು ಭಾಗದಲ್ಲಿ ಸಕಾಲದಲ್ಲಿ ಉತ್ತಮ ಮಳೆಯಾಗಿ ಜನ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದ ಬೆಳೆ ನಾಶವಾಗಿ ಜನ ಸಂಕಷ್ಟಕ್ಕೊಳಗಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ದೇವರ ದಯೆಯಿಂದ ಇನ್ನಾದರೂ ಮಳೆ ನಿಂತು ಜನರಿಗೆ ಉತ್ತಮ ಬೆಳೆ ಸಿಗುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕೆಲಸ ಆರಂಭಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಿನ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಸಂತ್ರಸ್ತರ ನೆರವಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂದು ಬಿಎಸ್ ವೈ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಸದ ಬಿ.ವೈ.ರಾಘವೇಂದ್ರ ಯಾವ ಕೆಲಸ ಮಾಡಬೇಕು ಅದನ್ನು ಮಾಡಿದ್ದಾರೆ. ಶಿಕಾರಿಪುರ ತಾಲೂಕಿಗೆ ಇನ್ನು ಏನೂ ಅಭಿವೃದ್ಧಿ ಕಾಮಗಾರಿಗಳ ಅಗತ್ಯವಿಲ್ಲ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವಾದರೆ ಶಿವಮೊಗ್ಗ ಜಿಲ್ಲೆಗೆ ಕೈಗಾರಿಕೆಗಳು ಬರಲು ಅನುಕೂಲವಾಗಲಿದೆ ಎಂದರು.