ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಖಾಸಗಿ ಸಾರ್ವಜನಿಕ ಸಹಭಾಗಿತ್ವ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ, ದತ್ತು ನೀಡುವುದು ಸಹಿತ ಹಲವು ಚಿಂತನೆಗಳು ನಡೆದಿವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ರವೀಂದ್ರ ಶ್ರೀಕಂಠಯ್ಯ, ಎಚ್.ಕೆ.ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪುರ್ ಸಹಿತ ಹಲವು ಸದಸ್ಯರ ಪ್ರಸ್ತಾವಕ್ಕೆ ಉತ್ತರಿಸಿದ ಅವರು, ಪ್ರವಾಸೋದ್ಯಮ ವಲಯದಲ್ಲಿ ಬಂಡವಾಳ ಹೂಡಿಕೆಗಾಗಿ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ವಿಚಾರದಲ್ಲಿ ಇಲಾಖೆಯಲ್ಲಿ ಅನುದಾನ ಕಡಿಮೆ ಇದೆ. ಹೀಗಾಗಿ ಪ್ರತಿ ವರ್ಷ ಒಂದೆರಡು ತಾಣಗಳ ಸಂಪೂರ್ಣ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಹೀಗಾದರೆ ಆದಾಯ ಸಂಗ್ರಹಕ್ಕೂ ದಾರಿಯಾಗುತ್ತದೆ ಎಂದು ಹೇಳಿದರು.
ಮಲೆನಾಡು , ಕರಾವಳಿ ಸಹಿತ ರಾಜ್ಯದ ಪ್ರವಾಸಿ ತಾಣಗಳು ಯಾವುದಕ್ಕೂ ಕಡಿಮೆ ಇಲ್ಲ. ಕೇಂದ್ರ ಮತ್ತು ರಾಜ್ಯದ ಅನುದಾನ ಸೇರಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು ಎಂದು ಹಲವು ಸದಸ್ಯರು ಪ್ರಸ್ತಾವಿಸಿದಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಸರಕಾರ ಈ ಕುರಿತು ಗಮನಹರಿಸಲಿದೆ ಎಂದು ಹೇಳಿದರು.
ಅನುದಾನ ಕೊರತೆ
ಬಿಜೆಪಿಯ ಕುಮಾರ ಬಂಗಾರಪ್ಪ ಅವರ ಮತ್ತೂಂದು ಪ್ರಶ್ನೆಗೆ ಉತ್ತರಿಸಿದ ಕ್ರೀಡಾ ಸಚಿವರೂ ಆದ ಸಿ.ಟಿ.ರವಿ, ಜಿಲ್ಲಾ ಮತ್ತು ತಾಲೂಕು ಕ್ರೀಡಾಂಗಣಗಳ ಅಭಿವದ್ಧಿಗೆ 381 ಕೋ. ರೂ. ಅಗತ್ಯವಿದ್ದು ಇಲಾಖೆಯಲ್ಲಿ 11 ಕೋ. ರೂ. ಮಾತ್ರ ಅನುದಾನವಿದೆ. ಇರುವುದರಲ್ಲೇ ಆದ್ಯತೆ ಮೇಲೆ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.