Advertisement

Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ

02:10 AM Jan 14, 2025 | Team Udayavani |

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 11ನೇ ವರ್ಷದ ರಾಜ್ಯಮಟ್ಟದ ಬ್ರಾಹ್ಮಣ ಮಹಾಸಮ್ಮೇಳನ ಹಾಗೂ 50ನೇ ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಜ. 18 ಮತ್ತು 19ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಭಾದ ಅಧ್ಯಕ್ಷ ಅಶೋಕ್‌ ಹಾರನಹಳ್ಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

1974ರಲ್ಲಿ ಆರಂಭಗೊಂಡ ಮಹಾಸಭಾವು ಸಂಸ್ಕಾರ, ಸಂಘಟನೆ ಹಾಗೂ ಸ್ವಾವಲಂಬನೆ ಧ್ಯೇಯದಡಿ ಸನಾತನ ಹಿಂದೂ ಧರ್ಮ ಹಾಗೂ ಸಂಸ್ಕೃತಿ, ಪರಂಪರೆ ರಕ್ಷಣೆ ಮಾಡುತ್ತಾ ಬಂದಿದೆ. ಈಗ 50 ವರ್ಷ ತುಂಬಿದ್ದು ವಿಪ್ರ ಸಮಾಜವನ್ನು ಸಂಘಟಿಸಿ ಸನಾತನ ಧರ್ಮಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ವಿವಿಧ ಸಮುದಾಯದ ಯತಿಗಳನ್ನು ಆಹ್ವಾನಿಸಿ ಈ ಬೃಹತ್‌ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.

“ಬ್ರಹ್ಮತೇಜ’ ಪ್ರಶಸ್ತಿ ಪ್ರದಾನ
18ರಂದು ಬೆಳಗ್ಗೆ ಶೃಂಗೇರಿಯ ಭಾರತೀ ತೀರ್ಥಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿ, ಗಂಗಾಧರೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಗಣಪತಿಹೋಮ, ಗಾಯತ್ರಿ ಮಹಾಯಾಗದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.

11.30ಕ್ಕೆ ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ, ಪ್ರಹ್ಲಾದ್‌ ಜೋಷಿ, ಎಚ್‌.ಡಿ. ಕುಮಾರಸ್ವಾಮಿ, ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಸ್ಮರಣ ಸಂಚಿಕೆ ಲೋಕಾರ್ಪಣೆ ಜತೆಗೆ ಪಾಣಿಗ್ರಹಣ ವೇದಿಕೆ, ವಾಣಿಜ್ಯ ಮೇಳ, ಆಹಾರ ಮೇಳ ಉದ್ಘಾಟನೆಯಾಗಲಿದೆ. ಅಪರಾಹ್ನ ವಿಪ್ರ ಸಾಧಕರಿಗೆ “ಬ್ರಹ್ಮತೇಜ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.

ಜ. 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಹಲವು ಗಣ್ಯರು ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಧರ್ಮ ಸಭೆ ನಡೆಯಲಿದೆ. ಕಾಂಚಿ ಕಾಮಕೋಟಿ ಸರ್ವಜ್ಞ ಪೀಠದ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಸುಬುಧೇಂದ್ರತೀರ್ಥ ಸ್ವಾಮೀಜಿ ಹಾಗೂ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದರು.

Advertisement

ಆಧ್ಯಾತ್ಮಿಕ ಚಿಂತಕ ಡಾ| ಪಾವಗಡ ಪ್ರಕಾಶ್‌ ರಾವ್‌, ಶಾಸಕ ಟಿ.ಎಸ್‌.ಶ್ರೀವತ್ಸ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಉಪಾಧ್ಯಕ್ಷ ಛಾಯಾಪತಿ, ಪ್ರಧಾನ ಕಾರ್ಯದರ್ಶಿ ಶ್ರೀಧರಮೂರ್ತಿ, ವೆಂಕಟೇಶ್‌ ಎಸ್‌. ನಾಯಕ್‌, ದಿವಾಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.