Advertisement

18ರಂದು ಜನಪ್ರತಿನಿಧಿಗಳ ಸಮಾವೇಶ

10:13 AM Jun 12, 2022 | Team Udayavani |

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಜೂ.18ರಂದು ಜನಪ್ರತಿನಿಧಿಗಳ ಸಮಾವೇಶ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸಲಿದ್ದಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

Advertisement

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಬೆಂಬಲಿತ ಸುಮಾರು 6 ಸಾವಿರದಷ್ಟು ಸದಸ್ಯರು ಗೆದ್ದಿದ್ದಾರೆ. ಇವರೊಟ್ಟಿಗೆ ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಸೇರಿದಂತೆ ಜನರಿಂದ ಆಯ್ಕೆಯಾಗಿರುವ ವಿವಿಧ ಹಂತದ ಜನಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಎಲ್ಲ ಸಚಿವರು, ಶಾಸಕರು ಆಗಮಿಸಲಿದ್ದಾರೆ. ಈ ಕುರಿತು ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿದ್ದು, ಸಮಾವೇಶದ ಪೂರ್ಣ ಚಿತ್ರಣವನ್ನು ಮೂರ್‍ನಾಲ್ಕು ದಿನಗಳಲ್ಲಿ ನೀಡಲಿದ್ದೇವೆ ಎಂದರು.

ಪ್ರವಾದಿ ಮೊಹಮ್ಮದ್‌ ಕುರಿತ ವಿವಾದಿತ ಹೇಳಿಕೆ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಪ್ರತಿಭಟನೆ ಕುರಿತಂತೆ ಸರ್ಕಾರ ಹಾಗೂ ನಮ್ಮ ಹಿರಿಯರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಎಲ್ಲಿಯೂ ಹಿಂಸೆ ಮಾಡಬಾರದು ಹಾಗೂ ಜನರಿಗೆ ತೊಂದರೆಯಾಗಬಾರದು. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಈಗಾಗಲೇ ಮುಖ್ಯಮಂತ್ರಿಗಳು ವಿಸರ್ಜನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಮುಕ್ತವಾಗಿ ಮಾತನಾಡಿದ್ದಾರೆ. ಎಲ್ಲ ವಿಚಾರದಲ್ಲೂ ರಾಜಕಾರಣ ಮಾಡಬಾರದು. ರಾಜ್ಯದಲ್ಲಿ ಯಾರು ಮುಖ್ಯಮಂತ್ರಿ ಹಾಗೂ ಮಂತ್ರಿ ಆಗಬೇಕು ಎನ್ನುವುದನ್ನು ಪ್ರಧಾನಿ ಮೋದಿ, ರಾಷ್ಟ್ರೀಯ ನಾಯಕರು, ಪಕ್ಷದ ಪ್ರಮುಖರು ತೀರ್ಮಾನಿಸುತ್ತಾರೆ. ಯಾರಾದರೂ ವೈಯಕ್ತಿವಾಗಿ ಅವರ ಭಾವನೆ ವ್ಯಕ್ತಪಡಿಸಿದರೆ ತಪ್ಪೇನಿಲ್ಲ ಎಂದರು.

ಮೀಸಲಾತಿ ವಿಚಾರದಲ್ಲಿ ನಿಲುವು ಸ್ಪಷ್ಟ: ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಶೇ.7.5ರಷ್ಟು ಮೀಸಲಾತಿ ನೀಡಲು ನಮ್ಮ ಪಕ್ಷ ಬದ್ಧವಾಗಿದೆ. ಕೆಲ ಕಾನೂನಾತ್ಮಕ ತೊಡಕುಗಳಿರುವುದರಿಂದ ವಿಳಂಬವಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಸ್ವಾಮೀಜಿಗಳ ಜತೆಗೆ ಮಾತನಾಡಿದ್ದಾರೆ. ಸದನದಲ್ಲೂ ಉತ್ತರ ನೀಡಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಮೂರು ಜನ ಗೆದ್ದಿದ್ದಾರೆ. ಬಿಜೆಪಿಗೆ “ಬಿ’ ಟೀಮ್‌ ಎನ್ನುವುದು ಇಲ್ಲ. ದೇಶದ ಅತಿ ದೊಡ್ಡ ಪಕ್ಷ ಬಿಜೆಪಿ “ಎ’ ಟೀಮ್‌ ಮಾತ್ರ ಇದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಬಿಜೆಪಿ ಮಾತ್ರ ಉಳಿಯುತ್ತದೆ. ರಾಜೀವ್‌ ಗಾಂಧಿ  ಅವಧಿಯಲ್ಲಿ 97-98 ಸದಸ್ಯರು ರಾಜ್ಯಸಭೆಯಲ್ಲಿದ್ದರು. ಆನಂತರ 34 ವರ್ಷಗಳ ನಂತರ ಪ್ರಧಾನಿ ಮೋದಿ ಅವಧಿಯಲ್ಲಿ ಸುಮಾರು 100 ಸದಸ್ಯರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಇದು ಸಾಮಾನ್ಯ ವಿಚಾರವಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next