ಧಾರವಾಡ: ಕೇವಲ ಉತ್ತಮ ಚಿಕಿತ್ಸೆ ಮಾಡಿದರೆ ಸಾಲದು ರೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಅಂದಾಗ ಮಾತ್ರ ಉತ್ತಮ ವೈದ್ಯರಾಗಲು ಸಾಧ್ಯ ಎಂದು ಎಸ್‌ಡಿಎಂ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ|ನಿರಂಜನಕುಮಾರ ಹೇಳಿದರು. ಭಾರತೀಯ ಮಕ್ಕಳ ವೈದ್ಯರ ಸಂಘದ ರಾಜ್ಯ ಶಾಖೆ ಹಾಗೂ ಜಿಲ್ಲಾ ಮಕ್ಕಳ ವೈದ್ಯರ ಸಂಘದ ವತಿಯಿಂದ ನಗರದ ಸತ್ತೂರಿನ ಡಾ| ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡ ‘ಕಾರಪೆಡಿಕಾನ್’ 37ನೇ ರಾಜ್ಯಮಟ್ಟದ ಮಕ್ಕಳ ವೈದ್ಯರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಹುಟ್ಟಿದ 1000 ಗ್ರಾಂ.ಇದ್ದ(ಕಡಿಮೆ ತೂಕ) ಮಗು ರಕ್ಷಣೆ ಮಾಡುವುದೇ ಕಷ್ಟ ಸಾಧ್ಯವಾಗಿತ್ತು. ಆದರೆ ಇಂದಿನ ದಿನಗಳಲ್ಲಿ 600, 700 ಗ್ರಾಂ.(ಅತೀ ಕಡಿಮೆ) ಮಕ್ಕಳನ್ನು ಸುಲಭವಾಗಿ ರಕ್ಷಿಸುವಷ್ಟು ವೈದ್ಯಕೀಯ ಕ್ಷೇತ್ರ ಬೆಳೆದಿದೆ. ಇದೇ ಕಾರಣದಿಂದ ಮಕ್ಕಳ ಸಾವಿನ ಪ್ರಮಾಣ ಶೇ.43ರಿಂದ 37ಕ್ಕೆ ಇಳಿದಿದೆ. ಇನ್ನೂ ಆರೋಗ್ಯಕರ ಹಾಗೂ ಶಕ್ತಿಯುತ ರಾಷ್ಟ್ರ ನಿರ್ಮಾಣಕ್ಕೆ ಆರೋಗ್ಯಕರ ಮಕ್ಕಳೇ ಬೇಕು ಎಂದರು.
ಮಕ್ಕಳು ಆರೋಗ್ಯದಿಂದ ಬೆಳೆಯುವಂತೆ ಮಕ್ಕಳ ವೈದ್ಯರು ಅನೇಕ ರೀತಿಯಲ್ಲಿ ಕಾರ್ಯ ಮಾಡುತ್ತಿದ್ದಾರೆ. ಕೇವಲ ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯವೂ ಇಂದಿನ ದಿನಗಳಲ್ಲಿ ಅತಿ ಮುಖ್ಯವಾಗಿದೆ. ಹುಟ್ಟಿದ ಪ್ರತಿಯೊಂದು ಮಗುವಿನಲ್ಲಿ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯಿಂದ ಅವರಲ್ಲಿನ ಕ್ರಿಯಾತ್ಮಕ ಗುಣವೇ ನಶಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಫಿನ್‌ಲ್ಯಾಂಡ್ ದೇಶದ ಮಾದರಿಯಲ್ಲೇ ನಮ್ಮ ದೇಶದಲ್ಲೂ ಶಿಕ್ಷಣ ವ್ಯವಸ್ಥೆ ಜಾರಿಯಾದರೆ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಭಾರತೀಯ ಮಕ್ಕಳ ವೈದ್ಯರ ಸಂಘದ ರಾಷ್ಟ್ರಾಧ್ಯಕ್ಷ ಡಾ|ಸಂತೋಷ ಸೋನ್ಸ್ ಮಾತನಾಡಿ, ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು. ಇದರಿಂದ ಸದೃಢ ದೇಶ ನಿರ್ಮಿಸಲು ಸಾಧ್ಯ ಎಂದರು. ಭಾರತೀಯ ಮಕ್ಕಳ ವೈದ್ಯರ ಸಂಘದ ರಾಜ್ಯಾಧ್ಯಕ್ಷ ಡಾ|ರವೀಂದ್ರ ಜೋಶಿ ಅವರು ನೂತನ ಅಧ್ಯಕ್ಷ ಡಾ| ಎನ್.ಕೆ. ಕಾಳಪ್ಪನವರ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಇದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳ ವೈದ್ಯರಾದ ಡಾ|ಸಂತೋಷ ಸೋನ್ಸ್, ಡಾ|ಶ್ರೀನಾಥ ಮುಗಳಿ, ಡಾ|ರಾಜನ್ ದೇಶಪಾಂಡೆ, ಡಾ|ಬಾಣಾಪುರಮಠ, ಡಾ|ಯತೇಶ ಪೂಜಾರ ಅವರನ್ನು ಸನ್ಮಾನಿಸಲಾಯಿತು. ನಂತರ ಉತ್ತಮ ಶಾಖೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್‌ಡಿಎಂ ಆಸ್ಪತ್ರೆ ಮಕ್ಕಳ ವಿಭಾಗದ ಡಾ| ಸ್.ಕೆ. ಜೋಶಿ, ಡಾ|ಬಕುಲ ಪರೇಕ, ಡಾ| ರಮೇಶಕುಮಾರ, ಡಾ| ಸಚಿನ್ ಕಿನ್ನಾಳಕರ, ಡಾ|ಶಿವಾನಂದ ಐ., ಡಾ|ಎಸ್. ಅಂಬಿ ಇದ್ದರು. ಡಾ|ಶ್ರೀನಾಥ ಮುಗಳಿ ಸ್ವಾಗತಿಸಿದರು. ಡಾ|ವಿಜಯ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಡಾ| ಶ್ರೀಕಾಂತ ಪೈ ನಿರೂಪಿಸಿದರು.