ಬೀದರ್: ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೆ ಆಗ್ರಹಿಸಿ ದೇಶಾದ್ಯಂತ ಹೋರಾಟ ತೀವ್ರಗೊಳಿಸಲು ದೆಹಲಿಯಲ್ಲಿ ಜು. 22 ರಂದು ರಾಷ್ಟ್ರೀಯ ರೈತ ಮುಖಂಡರ ಸಮಾವೇಶ ನಡೆಯಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚ ಸಂಘಟನೆಯ ದಕ್ಷಿಣ ಭಾರತ ಸಂಚಾಲಕ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ (kurubur shanthakumar) ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ ಬಗ್ಗೆ ನಾಲ್ಕು ಸಭೆಗಳನ್ನು ನಡೆಸಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಆಕ್ರೋಶ ವ್ಯಕ್ತಪಡಿಸಿದರು.
ರೈತ ಹೋರಾಟದಿಂದ ಎಚ್ಚೆತ್ತುಕೊಂಡು ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿದ ಪ್ರಧಾನಿ ಮೋದಿ ಸರ್ಕಾರ, ಡಾ. ಸ್ವಾಮಿನಾಥನ್ ಆಯೋಗದ ವರದಿಯಂತೆ ಎಂ ಎಸ್ಪಿ ಖಾತ್ರಿ ಕಾನೂನು ಜಾರಿಗೆ ತರಲು ಸಮಿತಿಯನ್ನು ರಚಿಸಿ ಎರಡು ವರ್ಷವಾದರೂ ಕಾರ್ಯರೂಪಕ್ಕೆ ತಂದಿಲ್ಲ. ಈ ಬಗ್ಗೆ ವಿಪಕ್ಷಗಳು ಸಂಸತ್ ನಲ್ಲಿ ಖಾಸಗಿ ಮಸೂದೆ ಮಂಡಿಸುವಂತೆ ದೇಶಾದ್ಯಂತ ರೈತ ಸಂಘಟನೆಗಳು ಈಚೆಗೆ ಸಂಸದರಿಗೆ ಮನವಿ ಪತ್ರ ನೀಡಿ ಒತ್ತಾಯಿಸಲಾಗಿದೆ ಎಂದು ಹೇಳಿದರು.
ಸಕ್ಕರೆ ಕಾರ್ಖಾನೆಗಳು ಇಳುವರಿ ತೋರಿಸುವಲ್ಲಿ, ತೂಕದಲ್ಲಿ, ಉಪ ಉತ್ಪನ್ನಗಳ ಲಾಭ ಹಂಚಿಕೆಯಲ್ಲಿ ಮೋಸ ಮಾಡುತ್ತಾ ರೈತರನ್ನ ವಂಚಿಸುತ್ತಿವೆ. ಕಬ್ಬು ಬೆಳೆಗಾರರಿಗೆ ಕಬ್ಬಿನ ಹಣ ಪಾವತಿಸದೆ ರೈತರನ್ನ ಸಂಕಷ್ಟಕ್ಕೆ ದುಡುತ್ತಿವೆ. ರೈತರ ಹಣ ನೀಡದ ರೈತರನ್ನು ವಂಚಿಸುವ ಕಾರ್ಖಾನೆಗಳ ರಹಧಾರಿ ಅಮಾನತ್ತು ಮಾಡಬೇಕು. ಕಬ್ಬು ಪ್ರದೇಶ ಉತ್ಪಾದನೆ ಕಡಿಮೆ ಇರುವ ಕಾರಣ ಪ್ರಸಕ್ತ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ಪೈಪೋಟಿಯಲ್ಲಿ ಕಬ್ಬು ಕರಿದಿಸಲು ಮುಂದಾಗುತ್ತಿವೆ. ರೈತರು ಜಾಗೃತರಾಗಿ ಎಫ್ಆರ್‌ಪಿ ದರಕ್ಕಿಂತ ಹೆಚ್ಚು ಬೆಲೆ ನೀಡುವ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.
ಕಾಡಂಚಿನ ಪ್ರದೇಶದಲ್ಲಿ ಕಾಡು ಪ್ರಾಣಿಗಳು ರೈತರ ಬೆಳೆಗಳನ್ನು ಹಾಳು ಮಾಡುತ್ತಿದ್ದು ಅರಣ್ಯ ಇಲಾಖೆ ಬೇಜವಾಬ್ದಾರಿತನ ತೋರುತ್ತಿದೆ. ಈ ಬಗ್ಗೆ ಅರಣ್ಯ ಸಚಿವರು ಈಶ್ವರ್ ಖಂಡ್ರೆ ಕೂಡಲೇ ರಾಜ್ಯಮಟ್ಟದಲ್ಲಿ ರೈತ ಮುಖಂಡರು ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಅರಿತುಕೊಂಡು ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಬೆಳೆ ವಿಮೆ ಕಟ್ಟಿರುವ ರೈತರಿಗೆ ಪರಿಹಾರದ ಹಣ ನ್ಯಾಯಯುತವಾಗಿ ಬರುತ್ತಿಲ್ಲ. ವಿಮಾ ಕಂಪನಿಗಳು ರೈತರ ಕಣ್ಣಿಗೆ ಮಣ್ಣೆರಚುತಿದ್ದಾರೆ. ನಕಲಿ ಬಿತ್ತನೆ ಬೀಜ, ನಕಲಿ ಗೊಬ್ಬರ, ನಕಲಿ ಕೀಟ ಕೀಟನಾಶಕ, ಮಾರಾಟಕ್ಕೆ ತಡೆಹಾಕಲು ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಶಿವರಾಜ್ ಪಾಟೀಲ್ ಹತಿವಾಳ, ರಾಜ್ಯ ಉಪಾಧ್ಯಕ್ಷ ಬಸವರಾಜ ಪಾಟೀಲ್, ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್ ಹಾಗೂ ಅವಿನಾಶ ಇದ್ದರು.