Advertisement

ಇಂದು ಸಮಾಲೋಚನಾ ಸಭೆ ನಡೆಸಿ ಸಮಿತಿ ರಚನೆ

10:07 AM Nov 11, 2018 | |

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಅತಿದೊಡ್ಡ ವಾಣಿಜ್ಯ ನಗರಿ ಪುತ್ತೂರನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವಂತೆ ಇದುವರೆಗೆ ಸಾಕಷ್ಟು ಆಗ್ರಹಗಳು ಕೇಳಿಬರುತ್ತಿತ್ತಷ್ಟೇ. ಇದೇ ರೀತಿ ನಡೆಯುತ್ತಿದ್ದರೆ ರಾಜಕೀಯ ಪಕ್ಷಗಳ ಆಶ್ವಾಸನೆಗಷ್ಟೇ ಸೀಮಿತ ಎಂದರಿತ ಕೆಲ ಯುವ ಮುಂದಾಳುಗಳು, ಮುಂದಿನ ನಡೆಗೆ ಸಾಂಸ್ಥಿಕ ಚೌಕಟ್ಟನ್ನು ನೀಡಲು ಮುಂದಾಗಿದ್ದಾರೆ.

Advertisement

ನ. 11ರಂದು ಪುತ್ತೂರು ನ್ಯಾಯಾಲಯ ಸಂಕೀರ್ಣದಲ್ಲಿರುವ ಪರಾಶರ ಸಭಾಂಗಣದಲ್ಲಿ ಈ ಬಗ್ಗೆ ಸಮಾಲೋಚನ ಸಭೆ ಕರೆಯಲಾಗಿದೆ. ಮೊದಲಿಗೆ ಪುತ್ತೂರು ಜಿಲ್ಲಾ ಕೇಂದ್ರ ಆಗಬೇಕಾದ ಅನಿವಾರ್ಯತೆ, ಅರ್ಹತೆಗಳ ಬಗ್ಗೆ ಸ್ಲೈಡ್  ಶೋ ನಡೆಯಲಿದೆ. ಬಳಿಕ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ನಡೆಯಲಿದೆ. ಈ ಎಲ್ಲ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಮುಂದಿನ ಹಾದಿಯ ಬಗ್ಗೆ ರೂಪುರೇಷೆ ತಯಾರಾಗಲಿದೆ. ಒಟ್ಟಿನಲ್ಲಿ ಪುತ್ತೂರು ಜಿಲ್ಲಾ ಕೇಂದ್ರವಾಗುವ ನಿಟ್ಟಿನಲ್ಲಿ ಮುಂದಿನ ಹಾದಿಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಇದಕ್ಕೆ ರಾಜಕೀಯ ಇಚ್ಚಾಶಕ್ತಿಯೂ ಸೇರಿದರೆ ಪುತ್ತೂರು ಸದ್ಯದಲ್ಲೇ ಜಿಲ್ಲಾಕೇಂದ್ರ ಆಗುವುದು ನಿಚ್ಚಳ.

ಇಂದು-ನಿನ್ನೆಯ ಬೇಡಿಕೆ ಅಲ್ಲ
ಈ ಹಿಂದೆ ರಚಿಸಲಾಗದ ರಾಮನಗರ ಹಾಗೂ ಚಿಕ್ಕಾಬಳ್ಳಾಪುರ ಜಿಲ್ಲೆಗಿಂತ ಹೆಚ್ಚಿನ ವಿಸ್ತೀರ್ಣ ಹಾಗೂ ಜನಸಂಖ್ಯೆಯನ್ನು ಪ್ರಸ್ತಾವಿತ ಜಿಲ್ಲಾಕೇಂದ್ರವಾಗಿರುವ ಪುತ್ತೂರು ಹೊಂದಿದೆ. ಆದ್ದರಿಂದ ಪುತ್ತೂರು,  ಸುಳ್ಯ, ಬೆಳ್ತಂಗಡಿ, ಕಡಬ ಹಾಗೂ ಬಂಟ್ವಾಳದ ಒಂದು ಭಾಗವನ್ನು ಒಂದಾಗಿಸಿ ಜಿಲ್ಲಾಯಾಗಿ ಘೋಷಣೆ ಮಾಡಿ ಎಂಬ ಬೇಡಿಕೆ ಇಂದು ನಿನ್ನೆಯದಲ್ಲ. ಪುತ್ತೂರನ್ನು ಜಿಲ್ಲಾಕೇಂದ್ರವಾಗಿ ಘೋಷಿಸುವ ಅನಿವಾರ್ಯತೆಯೂ ಇದೆ. ದೂರದ ಸುಳ್ಯದ ಜನತೆ ಜಿಲ್ಲಾ ಕಂದಾಯ ಅಧಿಕಾರಿಗಳನ್ನು ಭೇಟಿ ಆಗಬೇಕಿದ್ದರೆ ಪುತ್ತೂರಿಗೆ ಬಂದು ಮಂಗಳೂರಿಗೆ ತೆರಳಬೇಕು. ಇದು ಕಷ್ಟವೇ ಸರಿ. ಇದನ್ನು ಮನಗಂಡು ಜಿಲ್ಲಾಧಿಕಾರಿಗಳು ಪುತ್ತೂರಿನಲ್ಲಿ ವಾರಕ್ಕೆ ಒಂದು ದಿನ ಸಂಚಾರಿ ಪೀಠವನ್ನು ಆರಂಭಿಸಿದ್ದಾರೆ.

ಅಂಕಿ ಅಂಶಗಳು ಹೇಳುವ ಪ್ರಕಾರ ಪುತ್ತೂರನ್ನು ಗ್ರಾಮಾಂತರ ಜಿಲ್ಲೆಯಾಗಿ ಘೋಷಿಸಲು ಸಾಧ್ಯವಿದೆ. ಮಂಗಳೂರು ನಗರವನ್ನು ಕಮೀಷನರೇಟ್‌ ವ್ಯಾಪ್ತಿಗೆ ಒಳಪಡಿಸಿದ ನಂತರ ಈ ಬೇಡಿಕೆಗೆ ಇನ್ನಷ್ಟು ಪುಷ್ಟಿ ಸಿಕ್ಕಿತು. ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಎಲ್ಲ ಭಾಗಕ್ಕೂ ಪುತ್ತೂರು ಕೇಂದ್ರ ಹಾಗೂ ಉಪವಿಭಾಗ ಕೇಂದ್ರ ಆಗಿರುವುದರಿಂದ ಪುತ್ತೂರು ಜಿಲ್ಲಾ ಕೇಂದ್ರ ಆಗಬೇಕು ಎಂಬ ಮಾತಿನಲ್ಲಿ ಗಟ್ಟಿತನವೂ ಇದೆ.

ಪುತ್ತೂರು ಉಪಕೇಂದ್ರ
ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ, ವಾಣಿಜ್ಯಿಕವಾಗಿ ಸಾಕಷ್ಟು ಮಹತ್ವ ಪಡೆದುಕೊಂಡಿರುವ ಪುತ್ತೂರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೆಳವಣಿಗೆಗೂ ಒಳಪಟ್ಟಿದೆ. ಬ್ರಿಟಿಷ್‌ ಕಾಲದ ಸೌತ್‌ ಕೆನರಾ ಜಿಲ್ಲೆಯಲ್ಲಿ ಪುತ್ತೂರು ಒಂದು ತಾಲೂಕು ಆಗಿತ್ತು. 1927ರ ಮೊದಲಿಗೆ ಉಪ್ಪಿನಂಗಡಿ ತಾಲೂಕು ಕೇಂದ್ರವಾಗಿತ್ತು. ನೆರೆಯ ಕಾರಣಕ್ಕೆ ಪುತ್ತೂರಿಗೆ ವರ್ಗಾವಣೆಗೊಂಡಿತು. ಈ ಆಧಾರದಲ್ಲಿ ಪುತ್ತೂರು ತಾಲೂಕು ಆಗಿ 91 ವರ್ಷಗಳಾಗುತ್ತಾ ಬಂದಿದೆ. ನಂತರದ ದಿನಗಳಲ್ಲಿ ಪುತ್ತೂರು ವಿಭಾಗವಾಗುತ್ತಾ ಸುಳ್ಯ, ಬೆಳ್ತಂಗಡಿ ಪ್ರತ್ಯೇಕ ತಾಲೂಕಾಯಿತು. 

Advertisement

ಇಂದು ಅಭಿಪ್ರಾಯ ಸಂಗ್ರಹ
ಪುತ್ತೂರು ಜಿಲ್ಲಾ ಕೇಂದ್ರವಾಗಿ ಘೋಷಣೆ ಆದರೆ, ಅಭಿವೃದ್ಧಿಯ ಪ್ರಕ್ರಿಯೆಗೆ ವೇಗ ಸಿಗಲಿದೆ. ಈ ನಿಟ್ಟಿನಲ್ಲಿ ಜನರಿಂದ ಅಭಿಪ್ರಾಯ ಸಂಗ್ರಹಿಸುವ ಕೆಲಸ ನ. 11ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಬೇಕು – ಬೇಡ ಎಂಬ ಅಭಿಪ್ರಾಯಗಳು ಇರುವಂತಿದೆ. ಇದರ ಬಗ್ಗೆಯೂ ಸ್ಪಷ್ಟ ಚಿತ್ರಣ ಸಿಗಲಿದೆ.
– ಸತೀಶ್‌ ರೈ
ನೀರ್ಪಾಡಿ,ಗೌರವಾಧ್ಯಕ್ಷ,
ಕರಾವಳಿ ಕಲಾ ಪ್ರತಿಷ್ಠಾನ ಬೆಂಗಳೂರು

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next