Advertisement

ಎರಡ್ಮೂರು ದಿನದಲ್ಲಿ ಸರ್ವೇ ನಡೆಸಿ ಅಗತ್ಯ ಕ್ರಮ

01:26 PM Sep 19, 2022 | Team Udayavani |

ಕುಂದಗೋಳ: ನಮ್ಮ ನಿವಾಸಗಳ ಇ-ಸ್ವತ್ತುಗಳು ಆಗುತ್ತಿಲ್ಲ. ಮಾಡಲು ಹೋದರೆ ತಾಂತ್ರಿಕ ತೊಂದರೆಗಳು ಉಂಟಾಗುತ್ತಿದೆ ಎಂದು ಪಿಡಿಒಗಳು ಹೇಳುತ್ತಿದ್ದಾರೆ ಎಂದು ಇಡೀ ಗ್ರಾಮದ ಜನತೆ ತಹಶೀಲ್ದಾರ್‌ ಎದುರು ತಮ್ಮ ಗೋಳು ತೋಡಿಕೊಂಡರು.

Advertisement

ರಟ್ಟಿಗೇರಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮಸ್ಥರು, ಸೂರು ನಿರ್ಮಿಸಿಕೊಳ್ಳಲು ಬ್ಯಾಂಕಿನಲ್ಲಿ ಸಾಲ ದೊರೆಯುತ್ತಿಲ್ಲ. ನಮ್ಮ ಮನೆಗಳ ಕಂಪ್ಯೂಟರ್‌ ಉತಾರ ನೀಡುವಂತೆ ಪಂಚಾಯತಿಗೆ ಅರ್ಜಿ ಸಲ್ಲಿಸಿದರೆ ನಮ್ಮ ಸ್ಥಳ ಸರಕಾರ ಎಂದು ಸೂಚಿಸುತ್ತಿದೆ ಎಂದು ಪಿಡಿಒಗಳು ಹೇಳುತ್ತಿದ್ದಾರೆ ಎಂದು ದೂರಿದರು.

ಆಗ ತಹಶೀಲ್ದಾರ್‌ ಅಶೋಕ ಶಿಗ್ಗಾಂವ ಮಾತನಾಡಿ, ನಿಮ್ಮ ಗ್ರಾಮವು ಈಗಾಗಲೇ ಭೂಸ್ವಾಧೀನಗೊಂಡಿದ್ದು, ಈ ತೊಂದರೆಯನ್ನು ತ್ವರಿತಗತಿಯಲ್ಲಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

1960ರಲ್ಲಿ ಹಳೇ ರಟ್ಟಿಗೇರಿಯಲ್ಲಿ ಸಾಂಕ್ರಾಮಿಕ ರೋಗ ಬಂದಾಗ ಕೆರೆಯ ಬಲದಂಡೆಯಲ್ಲಿ ನಮ್ಮ ಹಿರಿಯರು ಬಂದು ನೆಲೆಸಿದ್ದಾರೆ. ಅಂದಿನ ಗಾಂವಠಾಣ ಜಾಗವನ್ನು ಅನೇಕರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಎಲ್ಲ ಜಾಗವು ಉಳ್ಳವರ ಪಾಲಾಗುತ್ತಿದೆ. ಆ ಜಾಗವನ್ನು ತೆರವುಗೊಳಿಸಬೇಕೆಂದು ಒಕ್ಕೊರಲಿನಿಂದ ಗ್ರಾಮಸ್ಥರು ದೂರಿದರು.

ಎರಡ್ಮೂರು ದಿನದಲ್ಲಿ ಸರ್ವೇ ಇಲಾಖೆಯಿಂದ ಅಳತೆ ಮಾಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಹಶೀಲ್ದಾರ್‌ ಹೇಳಿದರು.

Advertisement

ಸಂಚಾರ ತಾಪತ್ರಯ: ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿ ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದೆ. ಸಂಚರಿಸುವ ಜಾಗದಲ್ಲಿ ಎಮ್‌ ಸ್ಯಾಂಡ್‌ ಹಾಗೂ ಕಡಿಯನ್ನು ಬಿಟ್ಟಿದ್ದಾರೆ. ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗುತ್ತದೆ ಎಂದು ಜನರು ದೂರಿದರು. ಇಲಾಖಾಧಿಕಾರಿ ಆರ್‌.ಪಿ. ಕಿತ್ತೂರ ಮಾತನಾಡಿ, ಮಳೆ ಕಾರಣದಿಂದ ಸ್ಥಗಿತವಾಗಿದೆ. ಇನ್ನು 2-3 ದಿನದಲ್ಲಿ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರನಿಗೆ ಸೂಚಿಸುವುದಾಗಿ ಹೇಳಿದರು.

ಎರಡ್ಮೂರು ದಿನದಲ್ಲಿ ಆರಂಭಿಸದಿದ್ದರೆ ಸಾಮಗ್ರಿಗಳನ್ನು ನಾವು ಮನೆಗೆ ಕೊಂಡೊಯ್ಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಯೋವೃದ್ಧರೊಬ್ಬರು ಮಾತನಾಡಿ, ಸಾಮಾಜಿಕ ಭದ್ರತೆಯಲ್ಲಿ ನೀಡುವ ಪಿಂಚಣಿ ಯನ್ನು ಬ್ಯಾಂಕಿನಲ್ಲಿ ನೀಡುತ್ತಿಲ್ಲ. ಕೇಳಿದರೆ ಬೆಳೆಸಾಲವನ್ನು ಮರುಪಾವತಿ ಮಾಡಿದ ಬಳಿಕ ನೀಡುವುದಾಗಿ ಹೇಳುತ್ತಿದ್ದಾರೆ ಎಂದು ದೂರಿದರು.

ತಹಶೀಲ್ದಾರ್‌ ಮಾತನಾಡಿ, ಪಿಂಚಣಿ-ಬೆಳೆ ಪರಿಹಾರದ ಹಣವನ್ನು ಬ್ಯಾಂಕಿನಲ್ಲಿ ತಡೆಯುವಂತಿಲ್ಲ. ಕೂಡಲೇ ಸಂಬಂ ಧಿಸಿದ ಬ್ಯಾಂಕ್‌ಗಳಿಗೆ ಪತ್ರ ಬರೆಯುವುದಾಗಿ ಹೇಳಿದರು.

ಸಮಸ್ಯೆ ದರ್ಶನ: ಗ್ರಾಮದಲ್ಲಿ ಒಂದು ಓಣಿಯಲ್ಲಿಯೂ ಚರಂಡಿ ನಿರ್ಮಾಣಗೊಂಡಿಲ್ಲ. ಚರಂಡಿಯ ನೀರು ರಸ್ತೆ ಮಧ್ಯೆ ಹರಿಯುತ್ತಿದೆ ಎಂದು ಗ್ರಾಮಸ್ಥರು ದೂರಿ ತಹಶೀಲ್ದಾರ್‌ ಹಾಗೂ ತಾಪಂ ಇಒ ಡಾ| ಮಹೇಶ ಕುರಿಯವರನ್ನು ಊರನ್ನು ಒಮ್ಮೆ ನೋಡಬನ್ನಿ ಎಂದು ಕರೆದೊಯ್ದು ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿದರು.

ಇಒ ಡಾ| ಮಹೇಶ ಮಾತನಾಡಿ, ಪಿಡಿಒ ಸುನಿಲ ಕಾಂಬಳೆ ಅವರಿಗೆ ಕೂಡಲೆ ಸಭೆ ನಡೆಸಿ ಅಂದಾಜು ಪತ್ರಿಕೆ ಸಿದ್ಧಪಡಿಸಿ ನೀಡುವಂತೆ ಸೂಚಿಸಿದರು.ಗ್ರಾಪಂ ಅಧ್ಯಕ್ಷೆ ಪುಪ್ಪಾ ಮಂಜುನಾಥ ಕಂಬಳಿ ಅಧ್ಯಕ್ಷತೆ ವಹಿಸಿದ್ದರು.

ಸದಸ್ಯರಾದ ನೀಲಪ್ಪ ಆಡಿನ, ಶೋಭಾ ತಳ್ಳಳ್ಳಿ, ಮಂಜಪ್ಪ ಮಾದರ, ರಮೇಶ ಲಮಾಣಿ ಹಾಗೂ ಫಕ್ಕೀರಗೌಡ ಮಾಳಪ್ಪಗೌಡ್ರ, ಬೀರಪ್ಪ ಕಂಬಳಿ, ನೀಲಪ್ಪ ಗುಡೇನಕಟ್ಟಿ, ಮಂಜುನಾಥ ಸಂಶಿ, ರಮೇಶ ಸೂರಣಗಿ, ಮಾರುತಿ ಅಂಗಡಿ, ನಿಂಗನಗೌಡ ಪಾಟೀಲ, ಮುತ್ತು ಕಚೇರಿ, ಶಿವಪ್ಪ ಮುದಕಣ್ಣವರ, ಮುತ್ತು ಮುದಕಣ್ಣವರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next