Advertisement

 ಕಾಮಗಾರಿಗಳ ಭ್ರಷ್ಟಾಚಾರದ ಸ್ವತಂತ್ರ ತನಿಖೆ ನಡೆಸಿ

10:06 AM Jan 04, 2022 | Team Udayavani |

ಕಲಬುರಗಿ: ರಾಜ್ಯದಲ್ಲಿ ವಿವಿಧ ಇಲಾಖೆಗಳ ಸರ್ಕಾರಿ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್‌ ಪಡೆದು ಭ್ರಷ್ಟಾಚಾರ ನಡೆಸಲಾಗುತ್ತಿದೆ. ಇದರಲ್ಲಿ ಬಹುತೇಕ ಸಚಿವರು, ಶಾಸಕರು ಭಾಗಿಯಾಗಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಡಿ.ಕೆಂಪಣ್ಣ ಹೇಳಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮಿಷನ್‌ನ ಭ್ರಷ್ಟಾಚಾರದ ಬಗ್ಗೆ ಸುಪ್ರೀಂಕೋರ್ಟ್‌ ಅಥವಾ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಆಗಬೇಕು. ಸ್ವತಂತ್ರ ತನಿಖೆ ನಡೆಸಿದರೆ ಎಲ್ಲ ದಾಖಲಾತಿಗಳನ್ನು ನೀಡಲು ಗುತ್ತಿಗೆದಾರರು ಸಿದ್ಧರಿದ್ದೇವೆ ಎಂದರು.

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ 22 ಸಾವಿರ ಕೋಟಿ ರೂ. ಬಿಲ್‌ಗ‌ಳು ಬಾಕಿ ಇದೆ. ಇಷ್ಟ ಬಂದವರಿಗೆ ಮಾತ್ರ ಬಾಕಿ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ. ಮೊದಲು 10ರಿಂದ 15 ಪರ್ಸೆಂಟ್‌ ಕಮಿಷನ್‌ ನಡೆಯುತ್ತಿತ್ತು. ಆದರೆ, 2019ರ ನಂತರ ಪರ್ಸೆಂಟೇಜ್‌ ಪ್ರಮಾಣ ದಿಢೀರನೆ ಹೆಚ್ಚಾಗಿದೆ. ಹೀಗಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಭೇಟಿಗೆ ನಾಲ್ಕು ಬಾರಿ ಸಮಯ ಕೇಳಿದ್ದೇವು. ಅವರು ಸಮಯ ಕೊಡಲಿಲ್ಲ. ಹೀಗಾಗಿ ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇವೆ. ಪ್ರಧಾನಿ ಕಚೇರಿಯಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

ಎಲ್ಲ ಸಚಿವರು, ಶಾಸಕರು ಭ್ರಷ್ಟಾಚಾರಿಗಳಲ್ಲ. ಬೆರಳಿಕೆಯಷ್ಟು ಪ್ರಾಮಾಣಿಕರೂ ಇದ್ದಾರೆ. ಎಲ್ಲರನ್ನೂ ದೂಷಿಸುವುದು ತಪ್ಪು ಎಂದ ಅವರು, ಅಧಿಕಾರಿಗಳು ಕಾನೂನು ಮರೆತು ಬಿಟ್ಟಿದ್ದಾರೆ. ಶಾಸಕರು, ಸಚಿವರು ಹೇಳಿದವರಿಗೆ ಮಾತ್ರ ಗುತ್ತಿಗೆ ನೀಡುತ್ತಿದ್ದಾರೆ. ಈಗಲೂ ಮುಖ್ಯಮಂತ್ರಿ ನಮ್ಮನ್ನು ಕರೆದು ಮಾತನಾಡದಿದ್ದರೆ ರಾಷ್ಟ್ರಪತಿ ಮತ್ತು ಪ್ರಧಾನಿ ಬಳಿ ನಿಯೋಗ ಹೋಗಿ ನಮ್ಮ ಸಮಸ್ಯೆ ಹೇಳಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ವಿವಿಧ ಇಲಾಖೆಗಳಲ್ಲಿ 10 ಕೋಟಿ ರೂ.ಗಳಿಗಿಂತ ಹೆಚ್ಚು ಅನುದಾನದ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಮತ್ತು ಬಿಲ್‌ ಪಾವತಿ ಕುರಿತಂತೆ ಮುಖ್ಯಮಂತ್ರಿ ತನಿಖೆಗೆ ಆದೇಶ ನೀಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಭ್ರಷ್ಟಾಚಾರದ ಬಗ್ಗೆ ಜಾಣ ಮೌನ ವಹಿಸಲಾಗಿದೆ. ಕಾಮಗಾರಿಗಳ ಗುತ್ತಿಗೆಯಲ್ಲಿ ಪಾರದರ್ಶಕವಾದ ಟೆಂಡರ್‌ ಪ್ರಕ್ರಿಯೆ ಮತ್ತು ಬಿಲ್‌ ಪಾವತಿಗೆ ಹೊಸ ತಂತ್ರಜ್ಞಾನ ಒಳಗೊಂಡ ವ್ಯವಸ್ಥೆ ರೂಪಿಸಬೇಕೆಂದು ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ವಿ.ಕೃಷ್ಣಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಜಿ.ಎಂ. ರವೀಂದ್ರ, ಜಿಲ್ಲಾಧ್ಯಕ್ಷ ಜಗನ್ನಾಥ ಶೇಗಜಿ ಇದ್ದರು.

ಗುತ್ತಿಗೆದಾರರ ಸಂಘದಿಂದ ಬೃಹತ್‌ ಪ್ರತಿಭಟನೆ

ಭ್ರಷ್ಟಾಚಾರದ ಬಗ್ಗೆ ಉನ್ನತ ಮಟ್ಟದ ತನಿಖೆ ಆಗ್ರಹಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಗುತ್ತೆಗೆದಾರರ ಸಂಘದ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆಯನ್ನೂ ನಡೆಸಲಾಯಿತು. ಇಲ್ಲಿನ ಜಗತ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನೂರಾರು ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು. ಟೆಂಡರ್‌ಗಳ ಪ್ರಕ್ರಿಯೆಯಲ್ಲಿ ರಾಜಕಾರಣಿಗಳು ಹಸ್ತಕ್ಷೇಪ ಮಾಡಬಾರದು. ಜೇಷ್ಠತೆ ಆಧಾರದ ಮೇಲೆ ಹಣ ಪಾವತಿ ಮಾಡಬೇಕು. ಭೂಮಿಪೂಜೆ ಹೆಸರಲ್ಲಿ ಕಾಮಗಾರಿಗಳ ವಿಳಂಬ ಸಲ್ಲದು ಎಂಬುವುದು ಸೇರಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಯಾವ ಪಕ್ಷದ ಕೈವಾಡ ಇಲ್ಲ

ನಾವು ಮಾಡುತ್ತಿರುವ ಆರೋಪಗಳ ಹಿಂದೆ ಗುತ್ತಿಗೆದಾರರ ನೋವು-ಕಷ್ಟಗಳು ಹೊರತುಪಡಿಸಿ ಬೇರೆ ಯಾವುದೇ ಪಕ್ಷ ಮತ್ತು ರಾಜಕಾರಣಿಗಳ ಕೈವಾಡ ಇಲ್ಲ ಎಂದು ಕೆಂಪಣ್ಣ ಸ್ಪಷ್ಟಪಡಿಸಿದರು.ಇದರ ಹಿಂದೆ ರಾಜಕೀಯ ಕೈವಾಡ ಇದೆ ಎಂದು ಹೇಳುವ ಸಚಿವ ಆರ್‌.ಅಶೋಕ ಒಬ್ಬ ಮುರ್ಖ, ಸಚಿವರಾಗಿದ್ದುಕೊಂಡು ಸುಳ್ಳು ಹೇಳುವುದು ಬಿಡಲಿ. ಒಂದು ವೇಳೆ ಗುತ್ತಿಗೆದಾರರು ಮಾಡುವ ಆರೋಪಗಳೆಲ್ಲವೂ ಸುಳ್ಳು ಇವೆ ಎಂದು ಸಾಬೀತಪಡಿಸಿದರೆ ಯಾವುದೇ ಶಿಕ್ಷೆಗೂ ಸಿದ್ಧರಿದ್ದೇವೆ. ಸಚಿವರು ದುರಂಹಕಾರದಿಂದ ವರ್ತಿಸುವುದನ್ನು ಬಿಟ್ಟುಬಿಡಲಿ ಎಂದರು.

ಬಾಕಿ ಮೊತ್ತ ಬಿಡುಗಡೆ ಮಾಡಿ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ 22 ಸಾವಿರ ಕೋಟಿ ರೂ. ಮೊತ್ತದ ಬಿಲ್‌ಗ‌ಳು ಬಿಡುಗಡೆಯಾಗಬೇಕಿದ್ದು, ಈ ಬಿಲ್‌ಗ‌ಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಪ್ರಮುಖವಾಗಿ ಲೋಕೋಪಯೋಗಿ ಇಲಾಖೆಯಲ್ಲಿ ಐದು ಸಾವಿರ ಕೋಟಿ ರೂ. ಮಧ್ಯಮ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ ಎಂಟು ಸಾವಿರ ಕೋಟಿ ರೂ. ಬಿಬಿಎಂಪಿಯಲ್ಲಿ ಮೂರು ಸಾವಿರ ಕೋಟಿ ರೂ. ಬಾಕಿ ಉಳಿದಿದೆ. ಇಷ್ಟೊಂದು ಬಾಕಿ ಉಳಿಸಿಕೊಳ್ಳುವ ಪರಿಪಾಠ ಇತ್ತೀಚೆಗೆ ಬೆಳೆದಿದೆ. -ಡಿ.ಕೆಂಪಣ್ಣ, ಅಧ್ಯಕ್ಷ, ರಾಜ್ಯ ಗುತ್ತಿಗೆದಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next