ಬೆಂಗಳೂರು: ಕಾಂಗ್ರೆಸ್ ಮುಖಂಡ, ಸಚಿವ ಡಿಕೆ ಶಿವಕುಮಾರ್ ಅವರ ದೆಹಲಿ ನಿವಾಸದಲ್ಲಿ ಪತ್ತೆಯಾದ ಅಕ್ರಮ ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಹಾಗೂ ಆಪ್ತರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಇದರಿಂದ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಶನಿವಾರ ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಸುದೀರ್ಘವಾಗಿ ವಾದ, ಪ್ರತಿವಾದ ನಡೆಯಿತು. ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಕೂಡಾ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಕಳೆದ ವಿಚಾರಣೆ ವೇಳೆ ಜಾಮೀನು ಕೊಡಬೇಕೆಂದು ಡಿಕೆಶಿ ಮನವಿ ಮಾಡಿಕೊಂಡಿದ್ದರು. ಆದರೆ ಈ ಬಗ್ಗೆ ಮುಂದಿನ ವಿಚಾರಣೆಯಲ್ಲಿ ತೀರ್ಪು ನೀಡುವುದಾಗಿ ಹೇಳಿದ್ದ ಕೋರ್ಟ್, ಡಿಕೆಶಿ ಹಾಗೂ ಆಪ್ತರಿಗೆ ಮಧ್ಯಂತರ ಜಾಮೀನು ನೀಡಿತ್ತು.
ಆದರೆ ದೆಹಲಿಯ ನಿವಾಸದಲ್ಲಿ ಅಕ್ರಮವಾಗಿ ಸಿಕ್ಕ 8 ಕೋಟಿ ರೂಪಾಯಿ ಹಣದ ಪ್ರಕರಣದಲ್ಲಿ ಡಿಕೆಶಿ ಹಾಗೂ ಆಪ್ತರಿಗೆ ಜಾಮೀನು ನೀಡಬಾರದು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿದ್ದರು.
ಇಂದು ಪ್ರಕರಣದ ಕುರಿತಂತೆ ವಾದ, ಪ್ರತಿವಾದ ಆಲಿಸಿದ ಕೋರ್ಟ್, ಡಿಕೆಶಿಯನ್ನು ವಶಕ್ಕೆ ಪಡೆದೇ ವಿಚಾರಣೆ ನಡೆಸಬೇಕಾದ ಅಗತ್ಯವಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.