ಯಡ್ರಾಮಿ: ರಾಜಸ್ಥಾನದ ಉದಯಪುರ ಜಿಲ್ಲೆಯ ಬಲ್ದಾರ್‌ನಲ್ಲಿ ಟೈಲರ್ ಕನ್ಹಯ್ಯಲಾಲ್ ನ ಹತ್ಯೆ ಮಾಡಿರುವ ಘಟನೆ ಖಂಡಿಸಿ ಸೋಮವಾರ ಪಟ್ಟಣದಲ್ಲಿ ಶ್ರೀರಾಮ ಸೇನೆ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ಈ ವೇಳೆ ಶ್ರೀರಾಮ ಸೇನೆ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರುದ್ರಗೌಡ ಬಿರಾದಾರ ಮಾತನಾಡಿ, ಉಗ್ರವಾದಿಗಳು ಹಿಂದೂಗಳನ್ನು ಗುರಿಯಾಗಿಸಿಕೊಂಡು ಕೊಲೆ ಮಾಡುತ್ತಿರುವುದು ಖಂಡನೀಯವಾಗಿದೆ. ಅಲ್ಲದೇ ಪೈಶಾಚಿಕ ಕೃತ್ಯಗಳನ್ನೆಸಗುವ ಸನ್ನಿವೇಶಗಳನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ಆದ್ದರಿಂದ ಕನ್ಹಯ್ಯಲಾಲ್ ನನ್ನು ಹತ್ಯೆ ಮಾಡಿದ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಕ್ರೂರಿಗಳನ್ನು ಪೋಷಿಸುತ್ತಿರುವ ಸಂಘಟನೆಗಳನ್ನು ಕೂಡಲೇ ನಿಷೇಧಿಸುವಂತೆ ಒತ್ತಾಯಿಸಿದರು.
ಶ್ರೀರಾಮ ಸೇನೆ ತಾಲೂಕು ಘಟಕದ ಅಧ್ಯಕ್ಷ ಸಿದ್ಧು ಹಂಗರಗಿ, ಭಾಗೇಶ ಹೋತಿನಮಡು, ನಿಂಗನಗೌಡ ಜೇವರ್ಗಿ, ಬಸವರಾಜ ಜೇವರ್ಗಿ, ಮಲ್ಲಿಕಾರ್ಜುನ ನೀಲೂರ, ದಯಾನಂದ ಕಣಮೇಶ್ವರ, ಶ್ರೀಧರ ಕುಳಗೇರಿ, ಭಗವಂತ ನೆಲೋಗಿ, ಭೀಮು ದೊರಿ, ಶಿವು ಹಿರೇಮಠ ಇತರರಿದ್ದರು.