Advertisement

ಬಸ್‌ ಸಂಚಾರ ನಿರ್ಬಂಧಕ್ಕೆ ಖಂಡನೆ

10:26 AM May 15, 2022 | Team Udayavani |

ವಾಡಿ: ಪಟ್ಟಣ ಮಾರ್ಗವಾಗಿ ಕಲಬುರಗಿ ಹಾಗೂ ಯಾದಗಿರಿಗೆ ಹೋಗಬೇಕಾದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ ಗಳನ್ನು ಕಳೆದ ಒಂದು ತಿಂಗಳಿಂದ ನಗರ ಪ್ರವೇಶಿಸಲು ನಿರ್ಬಂಧಿಸಿದ್ದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಬೆಳಗ್ಗೆ 10 ಗಂಟೆಗೆ ಪಟ್ಟಣ ಹೊರ ವಲಯದ ಬಳಿರಾಮ ಚೌಕ್‌ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು, ನಗರ ಪ್ರವೇಶಿಸದೇ ಬೈಪಾಸ್‌ ಮಾರ್ಗದಿಂದ ಕಲಬುರಗಿ, ಯಾದಗಿರಿಗೆ ತೆರಳುತ್ತಿದ್ದ ಬಸ್‌ ಚಾಲಕರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಸಾರಿಗೆ ಸಂಸ್ಥೆಯ ಅಧಿ ಕಾರಿಗಳ ಜನವಿರೋಧಿ ನೀತಿ ವಿರೋಧಿಸಿ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಬಿಜೆಪಿ ನಗರ ಶಕ್ತಿಕೇಂದ್ರದ ಅಧ್ಯಕ್ಷ ಶಿವರಾಮ ಪವಾರ, ರಸ್ತೆ ಕಾಮಗಾರಿ ಜಾರಿಯಲ್ಲಿದೆ ಎನ್ನುವ ನೆಪವೊಡ್ಡಿ ಒಂದು ತಿಂಗಳಿಂದ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿದೆ. ನಗರದೊಳಗೆ ಬರಬೇಕಾದ ಬಸ್‌ಗಳು ಹೊರ ವಲಯದಿಂದ ಸಂಚರಿಸುತ್ತಿವೆ. ಇದರಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ಸಿಮೆಂಟ್‌ ಲಾರಿಗಳ ಓಡಾಟಕ್ಕೆ ಅವಕಾಶ ಕೊಟ್ಟು ಬಸ್‌ ಸಂಚಾರ ನಿಷೇಧಿಸಿರುವುದು ಕ್ಷೇತ್ರದ ಕಾಂಗ್ರೆಸ್‌ ಆಡಳಿತದ ಜನದ್ರೋಹಿ ಧೋರಣೆಯಾಗಿದೆ. ರಸ್ತೆ ಅಭಿವೃದ್ಧಿ ಶುರುವಾದ ಗಳಿಗೆಯಲ್ಲೇ ಸ್ಥಗಿತಗೊಂಡಿದೆ. ಗುತ್ತಿಗೆದಾರ ಮರಳು ಮತ್ತು ಜಲ್ಲಿಕಲ್ಲುಗಳ ರಾಶಿಯನ್ನು ರಸ್ತೆಯುದ್ದಕ್ಕೂ ಹಾಕಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಜನರ ಗೋಳಾಟ ಅರಿಯದ ಲೋಕೋಪಯೋಗಿ ಅಭಿಯಂತರರು ಅವೈಜ್ಞಾನಿಕ ಕಾಮಗಾರಿಗೆ ಮುಂದಾಗಿದ್ದಾರೆ. ಕಮಿಷನ್‌ ಕಚ್ಚಾಟದಲ್ಲಿ ಕಾಮಗಾರಿ ನಿಲ್ಲಿಸಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿದರು.

ಪುರಸಭೆ ವಿರೋಧ ಪಕ್ಷದ ನಾಯಕ ಭೀಮಶಾ ಜಿರೊಳ್ಳಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಹುಲ್‌ ಸಿಂಧಗಿ, ತಾಲೂಕು ಉಪಾಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಸಮಾಜಕಲ್ಯಾಣ ಇಲಾಖೆಯ ಐದು ಕೋಟಿ ರೂ. ಅನುದಾನವನ್ನು ಉತ್ತಮ ಸಿಸಿ ರಸ್ತೆ ಮೇಲೆ ಮತ್ತೊಮ್ಮೆ ರಸ್ತೆ ನಿರ್ಮಿಸಲು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಅವಕಾಶ ನೀಡಿರುವುದು ಕಾರ್ಯಕರ್ತರ ಜೇಬು ತುಂಬಿಸಲು ಎಂಬುದು ಸ್ಪಷ್ಟವಾಗಿದೆ. ಈಗಾಗಲೇ ಹಲವು ಬಡಾವಣೆ ಜನರು ರಸ್ತೆ ಎತ್ತರದಿಂದ ಮಳೆಯ ಆವಾಂತರ ಎದುರಿಸುವಂತಾಗಿದೆ. ಸಿಸಿ ರಸ್ತೆ ಕೈಬಿಟ್ಟು ಡಾಂಬರೀಕರಣ ರಸ್ತೆಗೆ ಮುಂದಾಗಬೇಕು. ಜಲ್ಲಿಕಲ್ಲು, ಸಿಮೆಂಟ್‌ ಮತ್ತು ಮರಳನ್ನು ವಾಹನ ಸಂಚರಿಸುವ ರಸ್ತೆಯಲ್ಲಿ ಹಾಕಿ ಅಪಘಾತಗಳಿಗೆ ಕಾರಣವಾಗಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಪಟ್ಟಣ ಪ್ರವೇಶಿಸದೇ ನೇರವಾಗಿ ಕಲಬುರಗಿಗೆ ಹೋಗುತ್ತಿದ್ದ ಹಲವು ಬಸ್‌ ಗಳನ್ನು ತಡೆದ ಪ್ರತಿಭಟನಾಕಾರರು, ಚಾಲಕರನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಪಟ್ಟಣದತ್ತ ಮುಖಮಾಡಿಸಿದರು. ಮನವಿಪತ್ರ ಸ್ವೀಕರಿಸಲು ಸ್ಥಳಕ್ಕಾಗಮಿಸಿದ್ದ ಯಾದಗಿರಿ ಸಹಾಯಕ ಸಂಚಾರಿ ನಿರೀಕ್ಷಕ ಕೆ.ಎಚ್‌.ಮಹೆಮೂದ್‌ ಅವರೊಂದಿಗೆ ಕಾರ್ಯಕರ್ತರು ವಾಗ್ವಾದ ನಡೆಸಿದರು.

ಬಿಜೆಪಿ ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ, ಕಿಶನ್‌ ಜಾಧವ, ಸಿದ್ಧಣ್ಣ ಕಲಶೆಟ್ಟಿ, ಯಮನಪ್ಪ ನವನಳ್ಳಿ, ಶಿವಶಂಕರ ಕಾಶೆಟ್ಟಿ, ರವಿ ಕಾರಬಾರಿ, ಅಂಬಾದಾಸ ಜಾಧವ, ಆನಂದ ಇಂಗಳಗಿ, ಬಾಬು ಕುಡಿ, ರಾಜು ವಾಲಿಯಾ, ಭೀಮರಾಯ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಶನಿವಾರದಿಂದಲೇ 40ಕ್ಕೂ ಹೆಚ್ಚು ಬಸ್‌ಗಳು ನಗರ ಪ್ರವೇಶಿಸಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next