ಬಂಕಾಪುರ: ಅಸಮರ್ಪಕ ವಿದ್ಯುತ್ ಪೂರೈಕೆಯನ್ನು ಖಂಡಿಸಿ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು, ಹೆಸ್ಕಾಂ ಕಚೇರಿಗೆ ಬೀಗ ಹಾಕಿ ಒಣಗಿದ ಜೋಳದ ಬೆಳೆ ಪ್ರದರ್ಶಿಸಿ, ಹಲಗೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಕಳೆದ ಎರಡು ತಿಂಗಳಿಂದ ಸರಿಯಾಗಿ ವಿದ್ಯುತ್ ವಿತರಣೆ ಮಾಡದ ಕಾರಣ ಅಲ್ಪಸ್ವಲ್ಪ ಬೆಳೆದ ಗೋವಿನಜೋಳ, ಶೇಂಗಾ, ಮೆಣಸಿಕಾಯಿ, ಸೋಯಾಬಿನ್, ಬಿಳಿಜೋಳ ಸೇರಿದಂತೆ ವಿವಿಧ ಬೆಳೆಗಳು ಸರಿಯಾಗಿ ನೀರಿಲ್ಲದೆ ಸಂಪೂರ್ಣ ಒಣಗಿ ನಾಶವಾಗಿ ಹೋಗುತ್ತಿವೆ. ಹೆಸ್ಕಾಂ ಅಧಿಕಾರಿಗಳು ರಾತ್ರಿ ಮೂರು ತಾಸು, ಹಗಲು ನಾಲ್ಕು ತಾಸು ವಿದ್ಯುತ್ ನೀಡುವುದಾಗಿ ಹೇಳಿ ನಂತರ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ದೂರಿದರು.
ಅತಿವೃಷ್ಟಿಯಿಂದ ಬೆಳೆ ಹಾನಿಯಾನಿ ಅನುಭವಿಸುವ ರೈತರು ಈಗಲಾದರೂ ನೀರಾವರಿ ಮೂಲಕ ಹಿಂಗಾರಿ ಬೆಳೆ ಬೆಳೆಯಬಹುದು ಎಂಬ ನಿರೀಕ್ಷೆಯಲ್ಲಿರುವಾಗ, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೆಳೆಗಳಿಗೆ ಸರಿಯಾಗಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ನೀಡಬೇಕು. ನಿಗದಿ ಪಡಿಸಿರುವ ಸಮಯದಲ್ಲಿ ವಿದ್ಯುತ್‌ನ್ನು ಸರಿಯಾಗಿ ಪೂರೈಕೆ ಮಾಡುವಂತೆ ಪ್ರತಿಭಟನಾ ನಿರತ ರೈತರು ಆಗ್ರಹಿಸಿದರು.
ಬಂಕಾಪುರ ಹೆಸ್ಕಾಂ ಗ್ರಾಮೀಣ ಶಾಖಾಧಿಕಾರಿ ನಾಗರಾಜ, ಹಾವೇರಿ ಹೆಸ್ಕಾಂ ಇಂಜಿನಿಯರ್ ವೀರಣ್ಣ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರನ್ನುದ್ಧೇಸಿಸಿ ಮಾತನಾಡಿ, ಬಂಕಾಪುರ ಗ್ರೇಡ್‌ಗೆ ನೀಡಬೇಕಾದಷ್ಟು ವಿದ್ಯುತ್ ವಿತರಣೆ ಮೇಲಿನಿಂದ ಪೂರೈಕೆ ಮಾಡುತ್ತಿಲ್ಲ. ಈ ಕುರಿತು ಪ್ರಸ್ತಾವನೆಯನ್ನು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಕಳುಹಿಸಿ ಕೋಡಲಾಗಿದೆ. ತಕ್ಷಣ ಸಮಸ್ಯೆಗೆ ಪರಿಹಾರ ನೀಡಲಾಗುವುದು. ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಹೆಸ್ಕಾಂ ಅಧಿಕಾರಿ ಗೌಸ್ ಶೇಖಲಿ, ಬಸವರಾಜ ದಳವಾಯಿ, ರೇಣುಕಗೌಡ ರೈತ ಮುಖಂಡರಾದ ಮುತ್ತಣ್ಣ ಕಲಕೋಟಿ, ಬಿ.ಎಲ್. ದೊಡ್ಡಮನಿ, ಪಿ.ಎಸ್. ಸಣ್ಣಮನಿ, ಬಸಪ್ಪ ದೊಡ್ಡಮನಿ, ರುದ್ರಪ್ಪ ಕೆಂಗಣ್ಣವರ, ರಮೇಶ ಸುಂಕದ, ಗೋವಿಂದಪ್ಪ ಕೆಗಣ್ಣವರ, ಫಕ್ಕೀರಪ್ಪ ದೊಡ್ಡಮನಿ, ಮಂಜು ಬಡಪ್ಪನವರ, ದೇವರಾಜ ನೇಕಾರ, ಎಲ್.ಬಿ. ಜಗದೀಶ, ಚಂದ್ರು ಪಚ್ಚಿ ಸೇರಿದಂತೆ ಶಿಡ್ಲಾಪುರ, ಹುನಗುಂದ, ಹುಲಿಕಟ್ಟಿ, ಹಳೆಬಂಕಾಪುರ, ಮಲ್ಲನಾಯಕನಕೊಪ್ಪ, ಹೋತನಹಳ್ಳಿ ರೈತರು ಉಪಸ್ಥಿತರಿದ್ದರು.