ರಾಯಚೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಬಗ್ಗೆ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಕೆ.ಎಲ್. ರಾಜಣ್ಣ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ನಗರದ ಡಾ| ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರಾಜಣ್ಣ ಅವರ ಪ್ರತಿಕೃತಿ ದಹಿಸುವ ಮೂಲಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಿಂದ ಪ್ರಧಾನಿಯಾದ ಏಕೈಕ ವ್ಯಕ್ತಿ ದೇವೇಗೌಡರು. ಅಲ್ಲದೇ, ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಹಿರಿಯ, ಮುತ್ಸದ್ಧಿ ರಾಜಕಾರಣಿಯಾಗಿರುವ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಮಾಜಿ ಶಾಸಕ ಎಲ್.ಶಾಸಕ ಕೆ.ಎಲ್. ರಾಜಣ್ಣ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಶಿಸ್ತು ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದರು.
ಎಚ್.ಡಿ. ದೇವೇಗೌಡರು ರಾಜ್ಯದ ಅಭಿವೃದ್ಧಿಯಲ್ಲಿ ಬಹಳ ಮಹತ್ವದ ಪಾತ್ರ ವಹಿಸಿದ್ದಾರೆ. ಜಿಲ್ಲೆಯಲ್ಲೂ ನೀರಾವರಿ ಸೌಲಭ್ಯ ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಂಥ ಅಲ್ಲದೇ, ಅನೇಕ ರಾಜಕಾರಣಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿ ಮಾರ್ಗದರ್ಶನ ನೀಡಿದ ಅವರ ಬಗ್ಗೆ ಅಪಾರ ಗೌರವವಿದೆ. ಅಂಥವರ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ರಾಜಣ್ಣ ಅವರ ಸಣ್ಣತನ ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಎನ್.ಶಿವಶಂಕರ್ ವಕೀಲ, ರಾಮನಗೌಡ ಏಗನೂರು, ಯೂಸೂಫ್ ಖಾನ್, ಪವನಕುಮಾರ್, ದಾನಪ್ಪ ಯಾದವ್, ಖಾಸಿಂ ನಾಯಕ, ಗಾಣಧಾಳ ಲಕ್ಷ್ಮೀಪತಿ, ಮಹಾಂತೇಶ ಪಾಟೀಲ್ ಅತ್ತನೂರು ಪಾಲ್ಗೊಂಡಿದ್ದರು.