Advertisement

ರಸ್ತೆಗಳೆಲ್ಲ ಕಾಂಕ್ರಿಟೀಕರಣ; ಒಳಚರಂಡಿ ವ್ಯವಸ್ಥೆ ಮತ್ತಷ್ಟು ಸುಧಾರಿಸಬೇಕಿದೆ!

10:52 PM Oct 20, 2019 | Team Udayavani |

ಮಹಾನಗರ: ಕೆಲವೆಡೆ ಇಕ್ಕಟ್ಟಾಗಿದ್ದರೂ ಕಾಂಕ್ರಿಟೀಕರಣಗೊಂಡ ರಸ್ತೆಗಳು. ರಸ್ತೆಗಳ ಇಕ್ಕೆಲಗಳಲ್ಲಿ ಫುಟ್‌ಪಾತ್‌ ನಿರ್ಮಾಣವಾಗಿ, ಒಳಚರಂಡಿ ವ್ಯವಸ್ಥೆ ಮತ್ತಷ್ಟು ಸುಧಾರಿಸಿದರೆ ಇದೊಂದು ಉತ್ತಮ ವಾರ್ಡ್‌ ಪಟ್ಟಿ ಸೇರಲು ಸಾಧ್ಯ. ಇದು ಮಹಾನಗರ ಪಾಲಿಕೆಯ 43ನೇ ಕುದ್ರೋಳಿ ವಾರ್ಡ್‌ನ ಚಿತ್ರಣ.

Advertisement

ಪ್ರಸಿದ್ಧ ಜಾಮಿಯಾ ಮಸೀದಿ, ವಿಶ್ರಾಂತಿ ಚರ್ಚ್‌ ಇದೇ ವಾರ್ಡ್‌ನಲ್ಲಿದ್ದು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಈ ವಾರ್ಡ್‌ಗೆ ಹೊಂದಿಕೊಂಡಿದೆ. ವಾರ್ಡ್‌ನ ಮುಖ್ಯ ರಸ್ತೆಗಳು ಇಕ್ಕಟ್ಟಾಗಿದ್ದು, ವಿಸ್ತರಣೆಗೊಳ್ಳಬೇಕಿದೆ. ಕೆಲವು ಕಡೆಗಳಲ್ಲಿ ಫುಟ್‌ಪಾತ್‌ ಕಾಮ ಗಾರಿ ನಡೆಯಬೇಕಿದೆ. ಇನ್ನೂ, ವಾರ್ಡ್‌ನಲ್ಲಿರುವ ಬಂದರು ಇಲಾಖೆ ಅಧೀನದ ಜಾಗದಲ್ಲಿ ಪಾರ್ಕ್‌ ಮಾಡಲಾಗಿದ್ದು, ಮಕ್ಕಳ ಆಟವಾಡುತ್ತಿದ್ದಾರೆ. ಜೋರಾಗಿ ಮಳೆ ಸುರಿದರೆ ನಾರಾಯಣಗುರು ಕಾಲೇಜು ಬಳಿ ರಸ್ತೆಯಲ್ಲಿ ಕೃತಕ ನೆರೆ ಸೃಷ್ಟಿ ಯಾಗಿ ವಾಹನ
ಸವಾರರಿಗೆ ಮತ್ತು ಸಾರ್ವ ಜನಿಕರಿಗೆ ತೊಂದರೆ ಉಂಟಾಗುತ್ತಿದೆ.

ಕೆಲ ವರ್ಷಗಳ ಹಿಂದಿನ ಸಂಶೋಧನೆಯೊಂದರ ಪ್ರಕಾರ ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳ ಪೈಕಿ ಕುದ್ರೋಳಿ ವಾರ್ಡ್‌ನಲ್ಲಿ ಅತೀ ಕಡಿಮೆ ಹಸುರಿನಿಂದ ಕೂಡಿದೆ. ಈ ವಾರ್ಡ್‌ನಲ್ಲಿ ಶೇ. 0.5ನಷ್ಟು ಪ್ರದೇಶದಲ್ಲಿ ಮಾತ್ರ ಮರ-ಗಿಡಗಳಿವೆ. ಈಗ ಅರಣ್ಯ ಇಲಾಖೆ ಎಚ್ಚೆತ್ತು ಗಿಡಗಳನ್ನು ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.ಸಾರ್ವಜನಿಕರೋ ರ್ವರು “ಸುದಿನ”ಕ್ಕೆ ಪ್ರತಿಕ್ರಿಯಿಸಿ, ವಾರ್ಡ್‌ ನಲ್ಲಿ 24 ಗಂಟೆಗಳ ಕಾಲ ನೀರು ಬರುವಂತಾಗಬೇಕು. ಮತ್ತಷ್ಟು ಕೊಳವಿಬಾವಿ ಸಂಪರ್ಕ ಕಲ್ಪಿಸ ಬೇಕು ಎನ್ನುತ್ತಾರೆ.

ಕುದ್ರೋಳಿ ವಾರ್ಡ್‌ನ ವಧಾಗೃಹ ಬಳಿ ಹರಿಯುವ ತೋಡು ಅವ್ಯವಸ್ಥೆಯಿಂದ ಕೂಡಿದೆ. ತೋಡಿನ ತುಂಬ ಗಲೀಜು ನೀರು ನಿಂತಿದ್ದು, ಸುತ್ತಮುತ್ತಲೂ ಗಬ್ಬು ವಾಸನೆಯಿಂದ ಕೂಡಿದೆ. ನೀರು ಕಲುಷಿತಗೊಂಡಿದ್ದು, ಈ ತೋಡಿನ ಹೂಳು ತೆಗೆಯದೆ ಸರಾಗವಾಗಿ ಹರಿಯುತ್ತಿಲ್ಲ. ತೋಡಿನಲ್ಲಿ ಪ್ಲಾಸ್ಟಿಕ್‌ ಬಾಟಲಿಗಳು, ತ್ಯಾಜ್ಯಗಳು ಬಿದ್ದುಕೊಂಡಿವೆ. ಈ ಬಗ್ಗೆ ನಿಕಟಪೂರ್ವ ಕಾರ್ಪೊರೇಟರ್‌ ಅಬ್ದುಲ್‌ ಅಜೀಜ್‌ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ “ಕುದ್ರೋಳಿಯಲ್ಲಿರುವ ವೆಟ್‌ವೆಲ್‌ನಲ್ಲಿ ಪಂಪಿಂಗ್‌ ವ್ಯವಸ್ಥೆ ಇಲ್ಲ. ಇದೇ ಕಾರಣಕ್ಕೆ ಕಲುಷಿತ ನೀರನ್ನು ತೋಡಿಗೆ ಬಿಡಲಾಗುತ್ತಿದೆ. ಇದರಿಂದ ನೀರು ಕಲುಷಿತಗೊಂಡು ಸುತ್ತಮುತ್ತಲ ಪ್ರದೇಶ ವಾಸನೆಯಿಂದ ಕೂಡಿದೆ ಎನ್ನುತ್ತಾರೆ.

ಈಡೇರಬೇಕಿದೆ ಕೆಲವೊಂದು ಬೇಡಿಕೆ
ಕುದ್ರೋಳಿ ವಾರ್ಡ್‌ನಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆದರೂ ಮುಂದಿನ ದಿನಗಳಲ್ಲಿ ಕೆಲವೊಂದು ಮೂಲ ಸೌಕರ್ಯಗಳಿಗೆ ಮತ್ತಷ್ಟು ಒತ್ತು ನೀಡಬೇಕಿದೆ. ಕೆಲವೊಂದು ಒಳರಸ್ತೆಗಳು ಕಾಂಕ್ರಿಟೀಕರಣಗೊಳ್ಳಬೇಕು. ರಸ್ತೆಗಳಿಗೆ ಇಂಟರ್‌ಲಾಕ್‌ ಕೆಲಸಗಳು ನಡೆಯಬೇಕು. ಕೆಲವೊಂದು ಕಡೆಗಳಲ್ಲಿ ಕುಡಿಯುವ ನೀರಿನ ನಳ್ಳಿ ವ್ಯವಸ್ಥೆ ಆಗಬೇಕು. ಒಳಚರಂಡಿ ದುರಸ್ತಿಗೊಳಿಸಬೇಕು. ರಸ್ತೆ ಬದಿಯಲ್ಲಿ ಮಳೆ ನೀರು ಹರಿಯಲು ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ.

Advertisement

ಪ್ರಮುಖ ಕಾಮಗಾರಿ
-ಜಾಮಿಯಾ ಮಸೀದಿಯಿಂದ ಮ್ಯಾಟ್ರಿಕ್ಸ್‌ ಶೋರೂಂ ವರೆಗೆ ಒಳಚರಂಡಿ ವ್ಯವಸ್ಥೆ ಮತ್ತು ನಳ್ಳಿ ನೀರು ವ್ಯವಸ್ಥೆ
-ಸಿಪಿಸಿ ಕಾಂಪೌಂಡ್‌ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ
-ಉರ್ದುಶಾಲೆಯಿಂದ ವಧಾಗೃಹವರೆಗಿನ ಒಳಚರಂಡಿ ವ್ಯವಸ್ಥೆ
-ಜಾಮಿಯಾ ಮಸೀದಿಯಿಂದ ಮ್ಯಾಟ್ರಿಕ್ಸ್‌ ಶೋರೂಂವರೆಗೆ ರಸ್ತೆ ಕಾಂಕ್ರಿಟೀಕರಣ
-ನಾರಾಯಣಗುರು ಶಾಲೆಯಿಂದ ಬರ್ಕೆ ಶಾಲೆವರೆಗೆ ರಸ್ತೆ ಕಾಂಕ್ರಿಟೀಕರಣ
-ವಿಶ್ರಾಂತಿ ಚರ್ಚ್‌ ಎದುರಿನ ರಸ್ತೆ, ಕರ್ನಲ್‌ ಗಾರ್ಡನ್‌, ರೆಹಮತ್‌ನಗರವರೆಗೆ ರಸ್ತೆ ಕಾಂಕ್ರಿಟೀಕರಣ
-ಟಿಪ್ಪು ಸುಲ್ತಾನ್‌ ನಗರದ ನೀರು ಹರಿಯುವ ತೋಡಿನ ಕಾಮಗಾರಿ

ಕುದ್ರೋಳಿ ವಾರ್ಡ್‌
ಭೌಗೋಳಿಕ ವ್ಯಾಪ್ತಿ: ಕುದ್ರೋಳಿ ಮಠದಕಣಿಯಿಂದ ಕುಂಡತ್ತಪಳ್ಳಿಯ ಒಂದು ಭಾಗ, ಮ್ಯಾಟ್ರಿಕ್ಸ್‌ ಶೋರೂಂನಿಂದ ಜಾಮಿಯಾ ಮಸೀದಿ, ಬರ್ಕೆ ಬ್ರಿಡ್ಜ್ನಿಂದ ವಿಶ್ರಾಂತಿ ಚರ್ಚ್‌ ವರೆಗೆ

ಸರ್ವಾಂಗೀಣ ಅಭಿವೃದ್ಧಿಗೆ ಒತ್ತು
ನನ್ನ ಅಧಿಕಾರದ ಅವಧಿಯಲ್ಲಿ ವಾರ್ಡ್‌ನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿವೆ. ಮುಂಬರುವ ದಿನಗಳಲ್ಲಿ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಯತ್ತ ಹೆಚ್ಚಿನ ಗಮನ ನೀಡಬೇಕು.
– ಅಬ್ದುಲ್‌ ಅಜೀಜ್‌

-  ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next