ಉಪ್ಪಿನಂಗಡಿ: ಗ್ರಾಮೀಣ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಸರಕಾರ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಯಸಿದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಕಳಪೆಯಾಗಿ, ಅನುದಾನ ಪೋಲಾಗಿರುವ ನಿದರ್ಶನ ಇಲ್ಲಿದೆ.
ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್‌ನ ನಟ್ಟಿಬೈಲು ಅಂಗನವಾಡಿ ಸಮೀಪ ಒಂದು ವರ್ಷದ ಹಿಂದೆ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಹದಗೆಟ್ಟು ಹೋಗಿದೆ.
ಪುತ್ತೂರು ಮಾಜಿ ಶಾಸಕರ ನಿಧಿಯಲ್ಲಿ 6 ಲಕ್ಷ ರೂ.ಗಳಿಗೂ ಹೆಚ್ಚು ಅನುದಾನದಲ್ಲಿ ರಚಿಸಲಾದ ಈ ಕಾಂಕ್ರೀಟ್ ರಸ್ತೆ ಐದೇ ತಿಂಗಳಲ್ಲಿ ಸಿಮೆಂಟ್ ಕರಗಿ ಹೊಂಡಮಯವಾಗಿದೆ. ಗುತ್ತಿಗೆದಾರರು ಆಗಲೇ ತೇಪೆ ಹಚ್ಚಿ, ಅನುದಾನಕ್ಕೆ ಎಂಜಿನಿಯರ್ ಕಡೆಯಿಂದ ಮಂಜೂರಾತಿಯನ್ನೂ ಪಡೆದಿದ್ದರು. ಈ ಕುರಿತು ಗ್ರಾಮ ಸಭೆಯಲ್ಲೂ ಟೀಕೆ ವ್ಯಕ್ತವಾಗಿತ್ತು. ಎಂಜಿನಿಯರ್ ಪರಿಶೀಲಿಸುವುದಾಗಿ ನೀಡಿದ್ದ ಭರವಸೆಯೂ ಹುಸಿಯಾಯಿತು.
ಮೂಲಸೌಕರ್ಯಗಳ ಒದಗಣೆ ವಿಚಾರದಲ್ಲಿ ಆನ್‌ಲೈನ್ ಟೆಂಡರ್ ಕರೆದರೆ ಇಂತಹ ಸಮಸ್ಯೆ ಉದ್ಭವಿಸುವುದು ಸಹಜ. ಅಧಿಕಾರಿಗಳು, ಎಂಜಿನಿಯರ್‌ಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಾಮಗಾರಿ ಪೂರ್ತಿಗೊಳಿಸಿದ ತಿಂಗಳಲ್ಲೇ ಸಿಮೆಂಟ್ ಕರಗಿ ಹೋಗಿದೆ. ತೇಪೆ ಹಚ್ಚಲಾಗಿದ್ದು, ಪುನಃ ಹೊಂಡಗಳು ನಿರ್ಮಾಣವಾಗಿವೆ ಎಂದು ಗ್ರಾಮಸ್ಥ ಚಿದಾನಂದ ಆರೋಪಿಸಿದ್ದಾರೆ.
ಹೋರಾಟಕ್ಕೆ ಸಿದ್ಧ
ವಾರ್ಡ್ ಸದಸ್ಯ ಚಂದ್ರಶೇಖರ ಮಡಿವಾಳ ನಟ್ಟಿಬೈಲು ಪ್ರತಿಕ್ರಿಯಿಸಿ, ಕಾಂಕ್ರೀಟ್ ಕಾಮಗಾರಿ ಕಳಪೆಯಾಗಿದೆ. ಅದನ್ನು ಸರಿಪಡಿಸುವ ಹೊಣೆ ಗುತ್ತಿಗೆದಾರರಿಗಿದೆ. ಮರು ಕಾಂಕ್ರೀಟ್ ಹಾಕದಿದ್ದರೆ ಯಾವ ಹೋರಾಟಕ್ಕೂ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಇಲಾಖೆಯೇ ಕ್ರಮ ಕೈಗೊಳ್ಳಲಿ
ಅಧ್ಯಕ್ಷ ಅಬ್ದುಲ್ ರಹಿಮಾನ್ ಪ್ರತಿಕ್ರಿಯಿಸಿ, ಮಾಜಿ ಶಾಸಕರು ತಮ್ಮ ನಿಧಿಯಿಂದ ಅನುದಾನ ನೀಡಿದ್ದಾರೆ. ಗುತ್ತಿಗೆದಾರರೇ ಕಳಪೆ ಕಾಮಗಾರಿಗೆ ಹೊಣೆ. ಕಾಮಗಾರಿ ಮುಗಿದ ಬಳಿಕ ಪಂಚಾಯತ್‌ಗೂ ಮಾಹಿತಿ ನೀಡಿಲ್ಲ. ಸಂಬಂಧಪಟ್ಟ ಇಲಾಖೆಯೇ ಅವರ ಮೇಲೆ ಕ್ರಮ ಜರಗಿಸಲಿ ಎಂದಿದ್ದಾರೆ.