ಮಲ್ಪೆ: ಕಾಂಕ್ರೀಟ್ ರಸ್ತೆ ಕುಸಿದ ಪರಿಣಾಮ ಚಲಿಸುತ್ತಿದ್ದ ಟಿಪ್ಪರೊಂದು ಪಲ್ಟಿಯಾಗಿ ಸಮೀಪದ ಹೊಳೆಗೆ ಬಿದ್ದ ಘಟನೆಯು ಶನಿವಾರ ಬೆಳಗ್ಗೆ ಕಿದಿಯೂರು ಸಂಕೇಶ ರಸ್ತೆಯಲ್ಲಿ ನಡೆದಿದೆ.
ಮಣ್ಣು ತುಂಬಿದ ಟಿಪ್ಪರ್‌ರೊಂದು ಸಂಚರಿಸುತ್ತಿದ್ದಾಗ ಕಾಂಕ್ರೀಟ್ ರಸ್ತೆಯು ಕುಸಿದ ಪರಿಣಾಮ ಬಿದ್ದು ಪಲ್ಟಿಯಾಯಿತು.
ರಸ್ತೆಯಲ್ಲಿ ಬಿರುಕು ಬಿಟ್ಟು ಸಂಪೂರ್ಣ ಕುಸಿದ ಪರಿಣಾಮ ಟಿಪ್ಪರ್ ಸಮೀಪದ ಹೊಳೆಗೆ ಉರುಳಿ ಬಿತ್ತು ಎನ್ನಲಾಗಿದೆ. ಈ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಸಂಜೆ ಬಳಿಕ 2 ಕ್ರೇನ್ ಮೂಲಕ ಟಿಪ್ಪರ್‌ನ್ನು ಮೇಲೆತ್ತಲಾಗಿದೆ.
2010ರ ಸಣ್ಣ ನೀರಾವರಿ ಇಲಾಖೆ ನದಿದಂಡೆ ಯೋಜನೆಯಡಿ ಕಲ್ಲು ಹಾಕಿದ್ದು, 2014ರ ನಬಾರ್ಡ್ ಯೋಜನೆಯಡಿ 40ಲಕ್ಷ ರೂಪಾಯಿ ಆನುದಾನದಲ್ಲಿ ಈ ರಸ್ತೆ ನಿರ್ಮಾಣವಾಗಿದೆ. ಹೊಳೆ ನೀರು ಹರಿದು ಹೋಗಲು ಮೋರಿಯನ್ನು ರಚಿಸಲಾಗಿದ್ದು ಇಲ್ಲೆರಡು ಸಿಮೆಂಟ್ ಪೈಪ್‌ಗ್ಳನ್ನು ಹಾಕಿ ಆದರ ಮೇಲೆ ರಸ್ತೆ ರಚಿಸಲಾಗಿದೆ.
ನದಿಯಲ್ಲಿ ಹೆಚ್ಚಾಗಿ ಏಡಿ ಇರುವುದು ಸಾಮಾನ್ಯ. ಮೋರಿನ ಬಳಿ ಏಡಿ ಅಲ್ಲಲ್ಲಿ ಹೊಂಡ ತೆಗೆದಿದ್ದರಿಂದ ಇಲ್ಲಿನ ಮಣ್ಣು ತೆರವಾಗಿದ್ದು ರಸ್ತೆಯಡಿ ಟೊಳ್ಳಾಗಿತ್ತು. ಸ್ಥಳೀಯರು ಅನೇಕ ಬಾರಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ತಿಳಿಸಿದ್ದರು ಎನ್ನಲಾಗಿದೆ. ರಸ್ತೆಯಡಿ ಟೊಳ್ಳಾಗಿದ್ದರಿಂದಲೇ ಕುಸಿದಿದೆ ಎಂದು ತಿಳಿದು ಬಂದಿದೆ.