ಪಣಜಿ: ವಿಶ್ವ ಆಯುರ್ವೇದ ಕಾಂಗ್ರೆಸ್ನ ಸಮಾರೋಪ ಮತ್ತು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 11 ರಂದು ಗೋವಾಕ್ಕೆ ಆಗಮಿಸಲಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ನೀಡಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಾವಂತ್, ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 11 ರಂದು ಗೋವಾಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಉತ್ತರ ಗೋವಾದ ಪೆರ್ನೆಮ್ ತಾಲೂಕಿನ ಧಾರ್ಗಳನಲ್ಲಿ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರ್ 8 ರಂದು ಉದ್ಘಾಟನೆಗೊಳ್ಳಲಿರುವ 9 ನೇ ವಿಶ್ವ ಆಯುರ್ವೇದ ಕಾಂಗ್ರೆಸ್ನ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿರುವರು. ಆಯುಷ್ನ ಅತಿದೊಡ್ಡ ಕಾರ್ಯಕ್ರಮವಾದ ವಿಶ್ವ ಆಯುರ್ವೇದ ಕಾಂಗ್ರೆಸ್ನಲ್ಲಿ 37 ದೇಶಗಳ ಆಯುರ್ವೇದ ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದರು.
ವಿಶ್ವ ಆಯುರ್ವೇದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯ ಹೊರರೋಗಿ ವಿಭಾಗಗಳು ಕಾರ್ಯನಿರ್ವಹಿಸಲಿವೆ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.