Advertisement

ಕೆಎಸ್ಸಾರ್ಟಿಸಿ ವಿಭಾಗಗಳ ವಿಲೀನಕ್ಕೆ ತೀರ್ಮಾನ !

11:41 PM Oct 23, 2020 | mahesh |

ಮಂಗಳೂರು: ಆರ್ಥಿಕ ಸುಸ್ಥಿತಿಗಾಗಿ ದೇಶವ್ಯಾಪಿ ಬ್ಯಾಂಕ್‌ ಸಹಿತ ಹಲವು ಸರಕಾರಿ ಸ್ವಾಮ್ಯದ ಸಂಸ್ಥೆಗಳು ವಿಲೀನದ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ ಸಾರಿಗೆ ವ್ಯವಸ್ಥೆಯಲ್ಲಿ ಎದುರಾಗುತ್ತಿರುವ ಆರ್ಥಿಕ ಹೊರೆ ತಪ್ಪಿಸುವುದಕ್ಕೆ ಕೆಎಸ್ಸಾರ್ಟಿಸಿಯ ವಿಭಾಗಗಳನ್ನೇ ಒಂದಕ್ಕೊಂದು ವಿಲೀನಗೊಳಿಸುವ ಮಹತ್ವದ ತೀರ್ಮಾನಕ್ಕೆ ಬಂದಿದೆ.

Advertisement

ಕೆಎಸ್ಸಾರ್ಟಿಸಿ ಮೂಲಗಳ ಪ್ರಕಾರ, ಪ್ರಥಮ ಹಂತದಲ್ಲಿ ಮೈಸೂರು ಗ್ರಾಮಾಂತರ ವಿಭಾಗ ಮತ್ತು ಮೈಸೂರು ನಗರ ಸಾರಿಗೆ ವಿಭಾಗ ಗಳನ್ನು ವಿಲೀನಗೊಳಿಸಲು ಚಿಂತನೆ ನಡೆಸಲಾಗಿದ್ದು, ಈಗಾಗಲೇ ಸಮಿತಿ ರಚನೆ ಮಾಡಲಾಗಿದೆ. ಮುಂದೆ ಇತರ ವಿಭಾಗ ವಿಲೀನ ನಡೆಯುವ ಸಾಧ್ಯತೆ ಇದೆ. ಕೆಎಸ್ಸಾರ್ಟಿಸಿ ಎಂಡಿ ಶಿವಯೋಗಿ ಕಳಸದ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ “ಕೆಎಸ್ಸಾರ್ಟಿಸಿ ನಿಗಮದ ವಿಭಾಗಗಳ ವಿಲೀನ ಪ್ರಕ್ರಿಯೆಯು ಆಡಳಿತಾತ್ಮಕ ವಿಚಾರವಾಗಿದೆ. ಈ ಬಗ್ಗೆ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.

ಸಮಿತಿಗೆ ಜವಾಬ್ದಾರಿ
ಮೈಸೂರು ಗ್ರಾಮಾಂತರ ಮತ್ತು ನಗರ ವಿಭಾಗಗಳ ವಿಲೀನಕ್ಕೆ ಸಂಬಂಧಿಸಿ ಸಮಿತಿ ರಚನೆ ಮಾಡಲಾಗಿದ್ದು, ಈ ಸಮಿತಿಯು ವಿಲೀನ ಪ್ರಕ್ರಿಯೆಯ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ವರದಿಯನ್ನು ಕೇಂದ್ರ ಕಚೇರಿಗೆ ನೀಡಲಿದೆ. ಮಂಗಳೂರು ವಿಭಾಗ ಕೆಎಸ್‌ಆರ್‌ಟಿಸಿ ಸಿಬಂದಿ ಮತ್ತು ಕಾರ್ಮಿಕ ಸಂಘದ ಪ್ರ. ಕಾರ್ಯದರ್ಶಿ ಪ್ರವೀಣ್‌ ಕುಮಾರ್‌ ಪ್ರತಿಕ್ರಿಯಿಸಿ “ಈಗಾಗಲೇ ಬಸ್‌ಗಳ ಶೆಡ್ನೂಲ್‌ ಕೂಡ ಕಡಿಮೆ ಯಾಗಿ ಕೆಲವೊಂದು ಟ್ರಿಪ್‌ ರದ್ದು ಗೊಂಡಿದೆ. ಹೀಗಿದ್ದಾಗ ಕೆಲಸ ಇಲ್ಲದ ಕಾರ್ಮಿಕರಿಗೆ ಸಂಬಳ ಸಿಗುತ್ತಿಲ್ಲ. ಆರ್ಥಿಕವಾಗಿ ನಷ್ಟದಲ್ಲಿರುವ ವಿಭಾಗವನ್ನು ವಿಲೀನಗೊಳಿಸಿದರೆ, ನಿಗಮದ ಆರ್ಥಿಕ ಹೊರೆ ಕಡಿಮೆಯಾಗುತ್ತದೆ’ ಎಂದಿದ್ದಾರೆ.

ಕರಾವಳಿಯಲ್ಲಿ ಕುತೂಹಲ !
ಒಂದೇ ವಿಭಾಗ ಮಾಡುವುದಾದರೆ ಕರಾವಳಿಯ ಸದ್ಯ ಇರುವ ಮಂಗಳೂರು ಮತ್ತು ಪುತ್ತೂರು ವಿಭಾಗ ವಿಲೀನವಾಗುವ ಸಾಧ್ಯತೆ ಇದೆ. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಸದ್ಯ ಕುಂದಾಪುರ, ಉಡುಪಿ ಮತ್ತು ಮಂಗಳೂರಿನ 3 ಡಿಪೋ ಇದೆ. ಅದೇ ರೀತಿ, ಪುತ್ತೂರು ವಿಭಾಗದಲ್ಲಿ ಪುತ್ತೂರು, ಬಿಸಿ ರೋಡು, ಧರ್ಮಸ್ಥಳ, ಮಡಿಕೇರಿ, ಸುಳ್ಯ ಡಿಪೋಗಳಿವೆ. ಈ ಮಧ್ಯೆ ಜಿಲ್ಲೆಗೊಂದು ವಿಭಾಗ ಮಾಡುವ ಚಿಂತನೆಯೂ ಸರಕಾರದ ಮುಂದಿದ್ದು, ಇದು ಸಾಧ್ಯವಾದರೆ ದ.ಕ., ಉಡುಪಿಗೆ ತಲಾ ಒಂದೊಂದು ವಿಭಾಗವಾಗುವ ಸಾಧ್ಯತೆ ಇದೆ.

ಸಿಎಂ ಜತೆ ಮಾತುಕತೆ
ಕೆಎಸ್ಸಾರ್ಟಿಸಿ ವಿಭಾಗಗಳ ವಿಲೀನದ ಬಗ್ಗೆ ಸಿಎಂ ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸಲಾಗಿದೆ. ಜಿಲ್ಲೆಯ ಅಕ್ಕ ಪಕ್ಕ ಎರಡೆರಡು ವಿಭಾಗಗಳಿದ್ದರೆ, ಅದನ್ನು ವಿಲೀನ ಮಾಡಿದರೆ ಕೆಎಸ್ಸಾರ್ಟಿಸಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಯಾವ ರೀತಿಯಲ್ಲಿ ವಿಲೀನ ಪ್ರಕ್ರಿಯೆ ನಡೆಸಬಹುದು, ಇದರ ಸಾಧಕ ಬಾಧಕಗಳ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಾಗುವುದು. – ಚಂದ್ರಪ್ಪ, ಕೆಎಸ್‌ಆರ್‌ಟಿಸಿ ಅಧ್ಯಕ್ಷ

Advertisement

ಕೆಎಸ್‌ಆರ್‌ಟಿಸಿ ಅಂಕಿ-ಅಂಶ
ಕೆಎಸ್ಸಾರ್ಟಿಸಿ ಒಟ್ಟು ವಿಭಾಗ: 16
ಡಿಪೋ ಸಂಖ್ಯೆ: 83
ಬಸ್‌ ನಿಲ್ದಾಣ: 166
ಸಿಬಂದಿ: 37,725
ಒಟ್ಟು ಬಸ್‌ಗಳು: 8738

 

Advertisement

Udayavani is now on Telegram. Click here to join our channel and stay updated with the latest news.

Next