ಒಮ್ಮೆ ದ್ರೋಣಾಚಾರ್ಯರು ಧನುರ್ವಿದ್ಯೆ ಹೇಳಿಕೊಡುತ್ತಿದ್ದರು. ಮರದ ಮೇಲೆ ಕುಳಿತಿದ್ದ ಭಾಸ ಪಕ್ಷಿಯನ್ನು (ಹದ್ದು) ತೋರಿಸಿ, “ನಾ ಹೇಳಿದ ಕೂಡಲೇ ಬಾಣ ಬಿಟ್ಟು, ಅದರ ತಲೆಯನ್ನು ತುಂಡರಿಸಬೇಕು’ ಎಂದು ಶಿಷ್ಯರಿಗೆ ಸೂಚಿಸಿದರು. ಮೊದಲು ಯುಧಿಷ್ಠಿರನ ಸರದಿ. ಬಿಲ್ಲನ್ನು ಹೆದೆಯೇರಿಸಿ ನಿಂತನು. ಆಗ ದ್ರೋಣರು, “ಮರದ ತುದಿಯಲ್ಲಿರುವ ಪಕ್ಷಿಯನ್ನು ನೋಡುತ್ತಿದ್ದೀಯಲ್ಲವೆ?’ ಎಂದು ಕೇಳಿದರು. “ನೋಡುತ್ತಿದ್ದೇನೆ, ಗುರುಗಳೇ’ ಎಂದನಾತ. ಮರುಕ್ಷಣದಲ್ಲಿಯೇ ದ್ರೋಣರ ಪ್ರಶ್ನೆ, “ಈ ವೃಕ್ಷವನ್ನೂ ನನ್ನನ್ನೂ ನೋಡುತ್ತಿರುವೆಯಲ್ಲವೆ?’. ಅದಕ್ಕೆ ಯುಧಿಷ್ಠಿರ, “ಈ ಮರವನ್ನೂ, ತಮ್ಮನ್ನೂ, ನನ್ನ ಸಹೋದರರನ್ನೂ, ಭಾಸಪಕ್ಷಿಯನ್ನೂ ನೋಡುತ್ತಿದ್ದೇನೆ’ ಎಂದನು.
ದ್ರೋಣರಿಗೆ ಕೋಪ ಉಕ್ಕಿ, ಯುದಿಷ್ಠಿರನನ್ನು ಪಕ್ಕದಲ್ಲಿ ನಿಲ್ಲಲು ಸೂಚಿಸಿದರು. ಆ ಬಳಿಕ ದುರ್ಯೋಧನ ಮೊದಲಾದವರ ಸರದಿ. “ಎಲ್ಲವನ್ನೂ ನೋಡುತ್ತಿದ್ದೇನೆ’ ಎಂಬುದೇ ಪ್ರತಿಯೊಬ್ಬರ ಉತ್ತರ! ಭೀಮಾದಿಗಳ ಉತ್ತರವೂ ಅದೇ ಆಗಿತ್ತು. ಆಮೇಲೆ ಅರ್ಜುನನ ಸರದಿ. ದ್ರೋಣರ ಅದೇ ಪ್ರಶ್ನೆಗೆ ಮಧ್ಯಮ ಪಾಂಡವ ಹೀಗೆ ಹೇಳಿದ: “ನಾನು ಭಾಸಪಕ್ಷಿಯನ್ನು ಮಾತ್ರ ನೋಡುತ್ತಿದ್ದೇನೆ. ಮರವಾಗಲಿ, ತಾವಾಗಲಿ, ನನಗೆ ಕಾಣುತ್ತಿಲ್ಲ’! ಆಗ ದ್ರೋಣರ ಪ್ರಶ್ನೆ, “ನೀನು ಪಕ್ಷಿಯನ್ನು ನೋಡುತ್ತಿರುವೆ ತಾನೆ?’. “ಪಕ್ಷಿಯ ತಲೆಯನ್ನು ಮಾತ್ರ ಕಾಣುತ್ತಿದ್ದೇನೆ.
ಪಕ್ಷಿಯ ಶರೀರವನ್ನಲ್ಲ (ಶಿರಃ ಪಶ್ಯಾಮಿ ಭಾಸಸ್ಯ, ನ ಗಾತ್ರಮ್)’ ಎಂದ, ಅರ್ಜುನ. ದ್ರೋಣರಿಗೆ ರೋಮಾಂಚನವಾಯಿತು… “ಬಿಡು ಬಾಣ’ ಎಂದರು. ಕ್ಷಣಾರ್ಧದಲ್ಲೇ ಪಕ್ಷಿಯ ತಲೆ, ನೆಲಕ್ಕುರುಳಿತು. ದ್ರೋಣರಿಗೆ ಪರಮಾನಂದವಾಯಿತು. ಮುಂದೆ ಅರ್ಜುನನು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡುತ್ತಲೇ ಹೋದ.ಯಾವುದೇ ಕೆಲಸವನ್ನು ಚೆನ್ನಾಗಿ ಮಾಡಲೂ ಏಕಾಗ್ರತೆ ಬೇಕು. ಗುರಿಯತ್ತಲೇ ಮನಸ್ಸಿರಬೇಕು. ಮನಸ್ಸು ಅತ್ತಿತ್ತ ಹರಿಯುತ್ತಿದ್ದರೆ, ಏಕಾಗ್ರತೆ ಸಾಧ್ಯವಾಗದು. ಕೊನೆಯ ಮಾತು: ತನ್ನಪಾಡಿಗಿದ್ದ ಒಂದು ಪಕ್ಷಿಯನ್ನು ಕೊಲ್ಲಿಸಿಬಿಟ್ಟರಲ್ಲಾ, ಎಂದು ಕೊರಗಬೇಡಿ. ಶಿಲ್ಪಿಯೊಬ್ಬನಿಂದ ಮಾಡಿಸಲಾಗಿದ್ದ ಕೃತ್ರಿಮ ಪಕ್ಷಿ ಅದು!
* ಡಾ|| ಕೆ.ಎಸ್. ಕಣ್ಣನ್, ಅಧ್ಯಾತ್ಮ ಚಿಂತಕರು, ಅಧ್ಯಾತ್ಮ ಯೋಗ ವಿಜ್ಞಾನ ಮಂದಿರಂ