ವಾಷಿಂಗಟ್ಟನ್: ಮಧ್ಯಪ್ರಾಚ್ಯ ದೇಶ ಸಿರಿಯಾದಲ್ಲಿ ಇತ್ತೀಚೆಗಷ್ಟೇ ಐಸಿಸ್ ಜಾಗತಿಕ ಉಗ್ರ ಸಂಘಟನೆಯ ಮುಖಂಡ ಅಬು – ಬಕರ್ ಅಲ್ – ಬಗ್ದಾದಿಯನ್ನು ಹತ್ಯೆಮಾಡಿದ ಅಮೆರಿಕಾ ವಿಶೇಷ ಮಿಲಿಟರಿ ಪಡೆಯ ತಂಡದಲ್ಲಿದ್ದ ಮಿಲಿಟರಿ ಶ್ವಾನ ಕೊನಾನ್ ಇಂದು ಶ್ವೇತಭವನದಲ್ಲಿ ಅಮೆರಿಕಾ ಆದ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿತು.
ಈ ಸಂದರ್ಭದಲ್ಲಿ ಕೊನಾನ್ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ ಡೊನಾಲ್ಡ್ ಟ್ರಂಪ್ ಆ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಗಾಯಗೊಂಡು ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಈ ಶ್ವಾನವನ್ನು ‘ಟಫ್ ಕುಕೀ’ (ಗಟ್ಟಿಗಿತ್ತಿ) ಎಂದು ಪ್ರಶಂಸಿದ್ದಾರೆ. ಯಶಸ್ವೀ ಕಾರ್ಯಾಚರಣೆಯನ್ನು ಮುಗಿಸಿಕೊಂಡು ಮಧ್ಯಪ್ರಾಚ್ಯದಿಂದ ಅಮೆರಿಕಾಕ್ಕೆ ಬಂದಿಳಿದ ಕೊನಾನ್ ಗೆ ಗೌರವ ಪದಕವನ್ನು ಪ್ರದಾನಿಸಲಾಯಿತು.
ಒಂದು ಹಂತದಲ್ಲಿ ಈ ಮಿಲಿಟರಿ ಶ್ವಾನ ಕೊನಾನ್ ಕುರಿತಾದಂತೆ ಅಧ್ಯಕ್ಷ ಟ್ರಂಪ್ ಅವರು ತನ್ನ ಜೊತೆ ಮಾತನಾಡುತ್ತಿದ್ದ ಪತ್ರಕರ್ತರ ಕಾಲೆಳೆದ ಪ್ರಸಂಗವೂ ನಡೆಯಿತು. ‘ನೀವು ಬಾಯಿ ತೆರೆದರೆ ನಿಮ್ಮ ಮೇಲೆ ದಾಳಿಮಾಡುವಂತೆ ಇದಕ್ಕೆ ತರಬೇತು ನೀಡಲಾಗಿದೆ. ಹಾಗಾಗಿ ನೀವು ತುಂಬಾ ಜಾಗರೂಕರಾಗಿರಬೇಕು’ ಎಂದು ಟ್ರಂಪ್ ಅವರು ಪತ್ರಕರ್ತರನ್ನುದ್ದೇಶಿಸಿ ಹೇಳಿದರು.
‘ಬಗ್ದಾದಿ ಬೇಟೆ ಮಿಷನ್ ನಲ್ಲಿ ಕೊನಾನ್ ಗಂಭೀರವಾಗಿ ಗಾಯಗೊಂಡಿತ್ತು ಮತ್ತು ಅದು ಇಷ್ಟುಬೇಗ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆ ನಮಗಿರಲಿಲ್ಲ, ಆದರೆ ಇದೀಗ ಕೊನಾನ್ ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಮತ್ತು ಮುಂಬರುವ ದಿನಗಳಲ್ಲಿ ಇದರ ಸೇವೆ ಮಿಲಿಟರಿಗೆ ಲಭ್ಯವಾಗಲಿದೆ’ ಎಂದು ಟ್ರಂಪ್ ಸಂತೋಷದಿಂದ ನುಡಿದರು. ಈ ಮೂಲಕ ಕೊನಾನ್ ನಿವೃತ್ತಿಯಾಗಲಿದೆ ಎಂಬ ಊಹಾಪೋಹಗಳನ್ನು ಟ್ರಂಪ್ ತಳ್ಳಿಹಾಕಿದ್ದಾರೆ.
ಸಿರಿಯಾದ ಇಡ್ಲಿಬ್ ಪ್ರಾಂತ್ಯದಲ್ಲಿದ್ದ ಬಗ್ದಾದಿ ಮನೆಯನ್ನು ಪತ್ತೆಹಚ್ಚುವಲ್ಲಿ ಈ ಮಿಲಿಟರಿ ಶ್ವಾನ ಪ್ರಮುಖ ಪಾತ್ರವನ್ನು ವಹಿಸಿತ್ತು. ಮತ್ತು ಬಗ್ದಾದಿ ಮನೆಯೊಳಗಿದ್ದ ಸುರಂಗ ಮಾರ್ಗದಿಂದ ಆತ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಆತನನ್ನು ಕೊನಾನ್ ಅಟ್ಟಿಸಿಕೊಂಡು ಹೋಗಿತ್ತು. ಈ ಸಂದರ್ಭದಲ್ಲಿ ಬಗ್ದಾದಿ ತನ್ನನ್ನು ತಾನು ಸ್ಪೋಟಿಸಿಕೊಂಡ ಸಂದರ್ಭದಲ್ಲಿ ಕೊನಾನ್ ಗೆ ಸಹ ಗಂಭೀರ ಸ್ವರೂಪದ ಗಾಯಗಳಾಗಿತ್ತು.
ಅಂದು ಬಗ್ದಾದಿ ಬೇಟೆಯಲ್ಲಿ ಕೊನಾನ್ ತೋರಿಸಿದ್ದ ಸಾಹಸವನ್ನು ಮತ್ತು ಅದು ಗಂಭೀರವಾಗಿ ಗಾಯಗೊಂಡ ವಿಚಾರವನ್ನು ಡೊನಾಲ್ಡ್ ಟ್ರಂಪ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದರು.