ಹಾನಗಲ್ಲ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಾಂತ್ರಿಕವಾಗಿ ಬದುಕಬೇಕಾದರೆ ಕಂಪ್ಯೂಟರ್ ಸಾಕ್ಷರತೆ ಅತ್ಯವಶ್ಯವಾಗಿದ್ದು, ಕಂಪ್ಯೂಟರ್ ಜ್ಞಾನ ಪಡೆದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಾಂತ್ರಿಕತೆಗೆ ಒಡ್ಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್. ಹುರಳಿ ಹೇಳಿದರು.
ಪಟ್ಟಣದಲ್ಲಿ ಜಿಪಂ, ಡಿಡಿಪಿಐ ಕಚೇರಿ ಹಾಗೂ ಯೂನಿಕ್ ಕಂಪ್ಯೂಟರ್ ಟ್ರೇನಿಂಗ್ ಸೆಂಟರ್ ಸಹಯೋಗದಲ್ಲಿ ನಡೆದ ಗಣಕಯಂತ್ರ ಸಾಕ್ಷರತಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಬಹಳಷ್ಟು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಪಡೆಯುವುದು ಕಷ್ಟಸಾಧ್ಯ ಹೀಗಾಗಿ ಜಿಪಂ ಸಿಇಒ ಮಹ್ಮದ್ ರೋಶನ್ ಅವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ನೀಡುವ ಉದ್ದೇಶದಿಂದ ಬೇಸಿಗೆ ಶಿಬಿರ ಆಯೋಜಿಸಿ, ಜಿಲ್ಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಲಭಿಸಲು ಕಾರಣರಾಗಿದ್ದಾರೆ.
ರಾಜ್ಯದಲ್ಲೇ ಪ್ರಥಮ ಬಾರಿಗೆ ಹಾವೇರಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಪಡೆಯುವ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಹಾನಗಲ್ಲ ಪಟ್ಟಣದ 5 ಪ್ರೌಢಶಾಲೆಯ ಹಾಗೂ 2 ಪ್ರಾಥಮಿಕ ಶಾಲೆಯ ಒಟ್ಟು 75 ವಿದ್ಯಾರ್ಥಿಗಳು ಲಾಭ ಪಡೆದಿದ್ದಾರೆ ಎಂದು ಹೇಳಿದರು.
Related Articles
ಗಣಕಯಂತ್ರ ಬೇಸಿಗೆ ಶಿಬಿರದಿಂದ ಕಂಪ್ಯೂಟರ್ ಸಂಬಂಧಿತ ಸಾಕಷ್ಟು ಮಾಹಿತಿ ದೊರೆತಿದೆ. ರಜಾ ಅವಧಿಯಲ್ಲಿ ಕಂಪ್ಯೂಟರ್ ಜ್ಞಾನ ಪಡೆಯುವ ಅವಕಾಶ ನೀಡಿದ ಅಧಿಕಾರಿ ವರ್ಗದವರಿಗೂ ಹಾಗೂ ಜಿಪಂ ಸಿಇಒ ಮಹ್ಮದ ರೋಶನ್ ಅವರಿಗೂ ಧನ್ಯವಾದ. ರಂಜಿತಾ ಲಕ್ಕಣ್ಣನವರ, ಪ್ರೌಢಶಾಲೆ ವಿದ್ಯಾರ್ಥಿನಿ
ರಜಾ ವೇಳೆಯಲ್ಲಿ ವಿದ್ಯಾರ್ಥಿಗಳು ಅಭ್ಯಾಸದಿಂದ ದೂರವಾಗಿ ಸಮಯ ಹಾಳುಮಾಡಿಕೊಳ್ಳುತ್ತಿದ್ದರು. ಕಂಪ್ಯೂಟರ್ ಸಾಕ್ಷರತೆಯ ಈ ಬೇಸಿಗೆ ಶಿಬಿರ ಮಕ್ಕಳಲ್ಲಿ ನವೋಲ್ಲಾಸ, ಕುತೂಹಲ ಹಾಗೂ ಭವಿಷ್ಯದ ತಾಂತ್ರಿಕತೆಗೆ ಹೊಂದಿಕೊಳ್ಳಲು ಸಹಕಾರಿಯಾಗಿದೆ. ಇದನ್ನು ಯೋಜಿಸಿದ ಜಿಪಂ ಸಿಇಒ ಅವರ ದೂರದೃಷ್ಟಿತ್ವಕ್ಕೆ ಧನ್ಯವಾದಗಳು. –ಶ್ರೀನಿವಾಸ ದೀಕ್ಷಿತ, ಸಂಪನ್ಮೂಲ ವ್ಯಕ್ತಿ