ಭೋಪಾಲ್ : ಈ ವರ್ಷಾಂತ್ಯ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನವೇ ಮಧ್ಯಪ್ರದೇಶದ ಬಿಜೆಪಿ ಸರಕಾರ ಐವರು ಹಿಂದೂ ಧಾರ್ಮಿಕ ನಾಯಕರಿಗೆ ಸಹಾಯಕ ಸಚಿವ ಸ್ಥಾನಮಾನವನ್ನು ನೀಡಿದ್ದು ಸರಕಾರದ ಈ ವಿವಾದಾತ್ಮಕ ಕ್ರಮವನ್ನು ವಿರೋಧ ಪಕ್ಷ ಕಾಂಗ್ರೆಸ್ ಬಲವಾಗಿ ಖಂಡಿಸಿದೆ.
ಮಧ್ಯಪ್ರದೇಶ ಸರಕಾರದ ಸಾಮಾನ್ಯ ಆಡಳಿತೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕೆ ಕೆ ಕಟಿಯಾ ಅವರು ಹೊರಡಿಸಿರುವ ಆದೇಶದ ಪ್ರಕಾರ ನರ್ಮದಾನಂದ ಮಹಾರಾಜ್, ಹರಿಹರಾನಂದ ಮಹಾರಾಜ್, ಕಂಪ್ಯೂಟರ್ ಬಾಬಾ, ಭಯ್ಯು ಮಹಾರಾಜ್ ಮತ್ತು ಪಂಡಿತ್ ಯೋಗೇಂದ್ರ ಮಹಾಂತ್ ಅವರಿಗೆ ಸಹಾಯಕ ಸಚಿವ ಸ್ಥಾನಮಾನ ಪ್ರಾಪ್ತವಾಗಿದೆ.
ಕಳೆದ ಮಾರ್ಚ್ 31ರಂದು ಈ ಐವರು ಧಾರ್ಮಿಕ ನಾಯಕರುಗಳನ್ನು ನರ್ಮದಾ ನದೀ ಸಂರಕ್ಷಣ ಸಮಿತಿಗೆ ನೇಮಕ ಮಾಡಲಾಗಿದೆ. ಸಮಿತಿಯ ಸದಸ್ಯರಾಗಿರುವ ಕಾರಣ ಇವರಿಗೆ ಸಹಾಯಕ ಸಚಿವ ಸ್ಥಾನಮಾನ ಪ್ರಾಪ್ತವಾಗಿದೆ ಎಂದು ಜಿಎಡಿ ಅಧಿಕಾರಿ ತಿಳಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗಳು ಈ ವರ್ಷಾಂತ್ಯ ನಡೆಯಲಿಕ್ಕಿದ್ದು ಅದಕ್ಕೆ ಮುನ್ನ ಈ ಐವರು ನಾಯಕರ ಧಾರ್ಮಿಕ ಪ್ರಭಾವವನ್ನು ಚುನವಾಣೆಯ ದೃಷ್ಟಿಯಲ್ಲಿ ಬಳಸಿಕೊಂಡು ಜನರ ಮತಗಳನ್ನು ಬಾಚಿಕೊಳ್ಳುವ ಹುನ್ನಾರ ಬಿಜೆಪಿ ಸರಕಾರದ್ದಾಗಿದೆ ಎಂದು ವಿಪಕ್ಷ ಕಾಂಗ್ರೆಸ್ ಕಿಡಿಕಾರಿದೆ.