Advertisement

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕಡ್ಡಾಯ ಶಿಕ್ಷಣ 

01:43 PM Jun 13, 2018 | Team Udayavani |

ಚಾಮರಾಜನಗರ: ಸಾಮಾಜಿಕ ಪಿಡುಗಾಗಿ ಪರಿಣಮಿಸಿರುವ ಬಾಲ ಕಾರ್ಮಿಕ ಪದ್ಧತಿಯ ಸಂಪೂರ್ಣ ನಿರ್ಮೂಲನೆಗೆ ಪೋಷಕರಲ್ಲಿ ಸ್ವಯಂ ಪ್ರೇರಣೆ ಅತ್ಯಗತ್ಯ ಎಂದು ಜಿಪಂ ಇಒ ಡಾ. ಕೆ.ಹರೀಶ್‌ ಕುಮಾರ್‌ ಹೇಳಿದರು. 

Advertisement

ಜಿಲ್ಲಾಡಳಿತದ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯಿಂದ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ಸಮಾಜದ ಆಸ್ತಿ. ಅವರನ್ನು ಸಮಾಜದ ಸತøಜೆಗಳನ್ನಾಗಿ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಕ್ಕಳಿಗೆ ಉತ್ತಮ ಸಮಾಜ ಹಾಗೂ ಪರಿಸರ ಒದಗಿಸುವುದಲ್ಲದೆ ಬೌದ್ಧಿಕತೆಯನ್ನು ತುಂಬಿ ಪ್ರಬುದ್ಧರನ್ನಾಗಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣಕ್ಕಾಗಿ ಕಡ್ಡಾಯ ಶಿಕ್ಷಣ ನೀತಿ ಜಾರಿಗೊಳಿಸಿವೆ ಎಂದರು.

ಬಾಲ ಕಾರ್ಮಿಕರು ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌, ರಸ್ತೆ ಬದಿ ಹಾಗೂ ಇತರೆಡೆಯಲ್ಲಿ ಕಡಿಮೆ ಸಂಬಳಕ್ಕಾಗಿ ದುಡಿಯುತ್ತಿದ್ದು, ಮೊದಲು ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ತರಬೇಕು. ಮಕ್ಕಳನ್ನು ಚಿಕ್ಕವಯಸ್ಸಿನಲ್ಲಿಯೆ ಕೂಲಿಗಾಗಿ ಕಳುಹಿಸದಂತೆ ಪೊಷಕರಿಗೂ ಅರಿವು ಮೂಡಿಸಬೇಕು. ಬಾಲ ಕಾರ್ಮಿಕ ಪದ್ದತಿ ತಡೆಯಲು ಸಂಘಸಂಸ್ಥೆಗಳು, ನಾಗರಿಕರು, ವಿದ್ಯಾರ್ಥಿಗಳು ಜಾಗೃತರಾಗಬೇಕಿದೆ ಎಂದು ಹರೀಶ್‌ಕುಮಾರ್‌ ತಿಳಿಸಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶೆ ವಿಶಾಲಾಕ್ಷಿ  ಮಾತನಾಡಿ, ಬಾಲಕಾರ್ಮಿಕ ಪದ್ದತಿ ತಡೆಯಲು ಇಂದು ವಿಶ್ವದೆಲ್ಲೆಡೆ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಸ್ವಾರ್ಥ, ದುರಾಸೆ ಹಾಗೂ ದುರುದ್ದೇಶದಿಂದ ಮಕ್ಕಳನ್ನು ಬಾಲಕಾರ್ಮಿಕ ಪದ್ದತಿಗೆ ದೂಡಲಾಗುತ್ತಿದೆ, ಇದು ಅಪರಾಧ ಎಂದರು.

Advertisement

ಬಾಲಕಾರ್ಮಿಕ ಪದ್ದತಿ ನಿಯಂತ್ರಣಕ್ಕಾಗಿ ಭಾರತ ಸರ್ಕಾರ 1986ರಲ್ಲಿ ಕಾಯ್ದೆ ಜಾರಿಗೊಳಿಸಿದೆ. ಕಾರ್ಖಾನೆ ಹಾಗೂ ಸ್ಫೋಟಕ ವಸ್ತುಗಳ ತಯಾರಿಕಾ ಉದ್ದಿಮೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ನಿಷಿದ್ಧ. ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ಮಕ್ಕಳಿಂದ ಬಲವಂತವಾಗಿ ಕಿತ್ತುಕೊಳ್ಳದೆ ಅವರಿಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಒದಗಿಸಬೇಕು. ಅವರಿಗೆ ಪುನರ್ವಸತಿ ಕಲ್ಪಿಸಿ ಕಡ್ಡಾಯ ಶಿಕ್ಷಣ ನೀಡಬೇಕು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ 2017ರ ಸಾಲಿನಲ್ಲಿ ಬಾಲಕಾರ್ಮಿಕ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಜಿಲ್ಲೆಯ ಸಿಎಸಿಎಲ್‌ಕೆ ಸಂಸ್ಥೆಯ ಜಿಲ್ಲಾ ಸಂಚಾಲಕ ಬಸವರಾಜು ಹಾಗೂ ಬಾಲಕಾರ್ಮಿಕರ ಪುನರ್ವಸತಿ ಕೇಂದ್ರದಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  

ಕಾರ್ಯಕ್ರಮದಲ್ಲಿ ಬಾಲ ನ್ಯಾಯಮಂಡಳಿ ಸದಸ್ಯ ಟಿ.ಜೆ. ಸುರೇಶ್‌, ಜಿಲ್ಲಾ ಕಾರ್ಮಿಕ ಅಧಿಕಾರಿ ವನಜಾಕ್ಷಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ‌ ಸತೀಶ್‌, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಮಹೇಶ್‌, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಇಂದುಶೇಖರ್‌, ಶಿಕ್ಷಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಸೋಮಶೇಖರಪ್ಪ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಸಿ.ಎನ್‌. ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next