ಹುಬ್ಬಳ್ಳಿ: ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ ಅಂಗಡಿ ಶನಿವಾರ ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಲಯ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.
ನಂತರ ಮಾತನಾಡಿದ ಸಚಿವರು, ನಿಗದಿತ ಸಮಯದಲ್ಲಿ 2021ರೊಳಗೆ ಲೋಂಡಾ- ಮೀರಜ್ ಡಬ್ಲಿಂಗ್ ಕಾಮಗಾರಿ ಪೂರ್ಣಗೊಳಿಸಬೇಕು. ನಿರ್ಮಾಣ ಘಟಕ ದೇಸೂರ- ಸಾಂಬ್ರೆ ಮಧ್ಯದ ಡಬ್ಲಿಂಗ್ ಕಾರ್ಯವನ್ನು 1 ವರ್ಷದಲ್ಲಿ ಪೂರ್ಣಗೊಳಿಸಬೇಕು ಎಂದರು.
ಬೆಳಗಾವಿಯ ಗೋಗಟೆ ಸರ್ಕಲ್‌ನಲ್ಲಿ ರಸ್ತೆ ಮೇಲ್ಸೇತುವೆ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. 3ನೇ ಗೇಟ್ ನಲ್ಲಿ ರಸ್ತೆ ಮೇಲ್ಸೇತುವೆ ಕಾರ್ಯ ತ್ವರಿತಗೊಳಿಸಬೇಕು. ಅಲ್ಲದೇಸಾಂಬ್ರೆ ನೂತನ ನಿಲ್ದಾಣದಲ್ಲಿ ರೈಲು ಹಾಗೂ ವಿಮಾನ ಸರಕು ಸಾಗಣೆಗೆ ಅನುಕೂಲ ಕಲ್ಪಿಸಲು ಮಲ್ಟಿ
ಮೋಡಲ್ ಟ್ರಾನ್ಸ್‌ಪೊರ್ಟ್ ಹಬ್ ಒಂದೇ ಸಂಕೀದಲ್ಲಿ ನಿರ್ಮಿಸಬೇಕು ಎಂದರು. ಇತ್ತೀಚೆಗೆ ಪರಿಚಯಿಸಲಾದ ವಿಜಯಪುರ-ಯಶವಂತಪುರ, ವಾಸ್ಕೋಡಗಾಮ- ಬೆಳಗಾವಿ ರೈಲುಗಳ ಸಮಯವನ್ನು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಅಧಿಕಾರಿಗಳು ಪರಿಷ್ಕರಣೆ ಮಾಡಬೇಕು. ಯಶವಂತಪುರ-ಪಂಢರಪುರ ರೈಲನ್ನು ಮೀರಜ್‌ನಿಂದ ಪಂಢರಪುರದವರೆಗೆ ರದ್ದು ಮಾಡಿದ್ದರಿಂದ ಆ ಭಾಗದ ಜನರಿಗೆ ತೊಂದರೆಯಾಗಿದೆ. ಕೇಂದ್ರೀಯ ರೈಲ್ವೆಯೊಂದಿಗೆ ಈ ದಿಸೆಯಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದರು.
ಹುಬ್ಬಳ್ಳಿ-ವಾರಣಾಸಿ ರೈಲನ್ನು ವಾರಕ್ಕೆ 4 ದಿನ ಸಂಚರಿಸುವ ಸಾಧ್ಯತೆ ಕುರಿತು ರೈಲ್ವೆ ಅಧಿಕಾರಿಗಳು ಗಮನ ಹರಿಸಬೇಕು. ಹುಬ್ಬಳ್ಳಿ, ಬೆಳಗಾವಿ ಮೂಲಕ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್ ಆರಂಭಿಸುವ ಪ್ರಸ್ತಾಪ ಸಾಧ್ಯತೆ ಕುರಿತು ಗಮನಿಸಬೇಕು ಎಂದರು.
ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್ ಸೇರಿದಂತೆ ನೈರುತ್ಯ ರೈಲ್ವೆ ವಲಯ ಹಿರಿಯ ಅಧಿಕಾರಿಗಳು ಇದ್ದರು.