Advertisement

ಸಂಪೂರ್ಣ ಹದಗೆಟ್ಟ ಕಂಪನ ತ್ರಿಶೂಲ ನಗರ ಸಂಪರ್ಕ ರಸ್ತೆ

10:16 PM May 31, 2019 | Team Udayavani |

ಅಜೆಕಾರು: ನೀರೆ ಗ್ರಾ.ಪಂ. ವ್ಯಾಪ್ತಿಯ ಕಂಪನದಿಂದ ತ್ರಿಶೂಲ ನಗರ ಸಂಪರ್ಕ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಸಂಚರಿಸಲು ಅಸಾಧ್ಯವಾಗಿದೆ.

Advertisement

ಬೈಲೂರು ಪಳ್ಳಿ ಸಂಪರ್ಕ ರಸ್ತೆಯ ಕೂಡು ರಸ್ತೆಯಾಗಿರುವ ಈ ರಸ್ತೆಯು ಸುಮಾರು 20 ವರ್ಷಗಳ ಹಿಂದೆ ಡಾಮರೀಕರಣಗೊಂಡಿದ್ದು ಅನಂತರದ ದಿನಗಳಲ್ಲಿ ಸೂಕ್ತ ನಿರ್ವಹಣೆಯಿಲ್ಲದೆ ಸಂಪೂರ್ಣ ಹೊಂಡಗುಂಡಿಗಳಿಂದ ಆವೃತವಾಗಿದೆ.

ಕಂಪನ ತ್ರಿಶೂಲ ನಗರ ವ್ಯಾಪ್ತಿಯಲ್ಲಿ ಸುಮಾರು 100ರಷ್ಟು ಮನೆಗಳಿದ್ದು, ಅವರು ಓಡಾಟಕ್ಕೆ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.

ಸುಮಾರು 2 ಕಿ.ಮೀ. ರಸ್ತೆಯಲ್ಲಿ ಬಹುತೇಕ ಹೊಂಡಗುಂಡಿಗಳೇ ಆವರಿಸಿದ್ದು ಜಲ್ಲಿಕಲ್ಲಿನ ರಾಶಿ ರಸ್ತೆಯುದ್ದಕ್ಕೂ ಇದೆ. ದಶಕಗಳಿಂದ ಹದಗೆಟ್ಟಿರುವ ಈ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಸ್ಥಳೀಯರು ನಿರಂತರವಾಗಿ ಮನವಿ ಮಾಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಕಂಪನ ಭಾಗದಲ್ಲಿ ಅಂಗನವಾಡಿ ಕೇಂದ್ರವಿದ್ದು ಇಲ್ಲಿಗೆ ಮಕ್ಕಳನ್ನು ಕಳುಹಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಕ್ಕಳನ್ನು ಕರೆದುಕೊಂಡು ಹೋಗುವ ಸಂದರ್ಭ ವಾಹನಗಳು ಬಂದಲ್ಲಿ ರಸ್ತೆಯ ಜಲ್ಲಿಕಲ್ಲುಗಳು ಮಕ್ಕಳ ಮೇಲೆ ಬೀಳುವ ಸಂಭವವೂ ಇದ್ದು ಹೆತ್ತವರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

Advertisement

ಬಸ್‌ ಇಲ್ಲ, ಆಟೋ ಬರಲ್ಲ!
ಈ ಭಾಗಕ್ಕೆ ಬಸ್‌ ವ್ಯವಸ್ಥೆ ಇಲ್ಲದೆ ಇರುವುದರಿಂದ ಸ್ಥಳೀಯರು ಆಟೋ ರಿಕ್ಷಾಗಳನ್ನೇ ಅವಲಂಬಿಸಿದ್ದಾರೆ. ಆದರೆ ರಸ್ತೆಯ ದುಸ್ಥಿತಿಯಿಂದಾಗಿ ಆಟೋ ಚಾಲಕರೂ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಕೆಲವೊಂದು ರಿಕ್ಷಾದವರು ಬಂದರೂ ದುಪ್ಪಟ್ಟು ಹಣ ತೆರಬೇಕು ಎಂದು ಸ್ಥಳೀಯರ ಅಳಲು.

ಹದಗೆಟ್ಟ ರಸ್ತೆಯ ಹೊಂಡ ಗುಂಡಿಗಳಲ್ಲಿ ಮಳೆ ಗಾಲದಲ್ಲಿ ನೀರು ಶೇಖರಣೆಗೊಳ್ಳುತ್ತದೆ. ಅಲ್ಲದೆ ಇಕ್ಕೆಲ ಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿಯೂ ಇಲ್ಲದಿರುವುದರಿಂದ ನೀರು ರಸ್ತೆ ಯಲ್ಲಿಯೇ ಹರಿದು ಇನ್ನಷ್ಟು ಹೊಂಡ ಗುಂಡಿಗಳು ನಿರ್ಮಾಣವಾಗುತ್ತಿವೆ. ಆದುದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳೀಯರ ಸಮಸ್ಯೆಯನ್ನು ಮನಗಂಡು ತ್ವರಿತವಾಗಿ ರಸ್ತೆ ಅಭಿವೃದ್ಧಿಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಶೀಘ್ರ ಅಭಿವೃದ್ಧಿಪಡಿಸಿ

ದಶಕಗಳ ಹಿಂದೆ ಡಾಮರೀಕರಣಗೊಂಡಿರುವ ರಸ್ತೆಯಲ್ಲಿ ಹೊಂಡಗುಂಡಿಗಳೇ ತುಂಬಿವೆ. ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಆವಶ್ಯಕತೆಯಿದೆ. ಸ್ಥಳೀಯರ ಸಂಪರ್ಕದ ಏಕೈಕ ರಸ್ತೆ ಇದಾಗಿರುವುದರಿಂದ ಶೀಘ್ರದಲ್ಲಿ ಅಭಿವೃದ್ಧಿ ಪಡಿಸಬೇಕಾಗಿದೆ. -ಉಷಾ ಶೆಟ್ಟಿ, ಸ್ಥಳೀಯರು

ಅನುದಾನ
ಕಾದಿರಿಸಲಾಗಿದೆ
ಕಂಪನ ತ್ರಿಶೂಲ ನಗರ ರಸ್ತೆ ಸಮಸ್ಯೆ ಬಗ್ಗೆ ಈಗಾಗಲೇ ಶಾಸಕರಿಗೆ ಮನವಿ ಮಾಡಲಾಗಿದೆ. ಶಾಸಕರು ರಸ್ತೆ ಅಭಿವೃದ್ಧಿಗಾಗಿ 20 ಲಕ್ಷ ರೂ. ಅನುದಾನ ಕಾದಿರಿಸಿದ್ದಾರೆ.
-ಸದಾನಂದ ಪ್ರಭು, ಅಧ್ಯಕ್ಷರು ನೀರೆ ಗ್ರಾ.ಪಂ.
Advertisement

Udayavani is now on Telegram. Click here to join our channel and stay updated with the latest news.

Next