ದಾವಣಗೆರೆ: ನಿಗದಿತ ಅವಧಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಸೂಚಿಸಿದ್ದಾರೆ. ಶುಕ್ರವಾರ ಅಪರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸ್ಮಾರ್ಟ್‌ಸಿಟಿ ಲೆವೆಲ್ ಅಡ್ವೆಸರಿ ಫೋರಂ ಸಭೆಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳು ನಿಗದಿತ ಅವಧಿಯೊಳಗೆ ಮುಕ್ತಾಯವಾಗದೆ ಜನರು ಜನಪ್ರತಿನಿಧಿ ಗಳನ್ನು ದೂರುತ್ತಿದ್ದಾರೆ. ಅದರಿಂದ ನಾವುಗಳು ಮುಜುಗರಕ್ಕೆ ಒಳಗಾಗುತ್ತಿದ್ದೇವೆ. ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು. ಕೆಲಸ ಮುಗಿಸಬೇಕು ಎಂದು ಗುಣಮಟ್ಟದಲ್ಲಿ ರಾಜೀ ಪ್ರಶ್ನೆಯೇ ಇಲ್ಲ. ಎಲ್ಲಾ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.
ಕಳೆದ 2 ವರ್ಷದ ಹಿಂದೆ ಕಾಮಗಾರಿ ಆರಂಭಗೊಂಡಿದ್ದರೂ ದಾವಣಗೆರೆ ಹಳೇ ಭಾಗದಲ್ಲಿನ ಕಾಮಗಾರಿ ಆಗಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿಗಳನ್ನು ನಿಗದಿತ ಅವ ಧಿಯೊಳಗೆ ಮುಗಿಸಲು ವಿಳಂಬವೇಕೆ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ, ವ್ಯವಸ್ಥಾಪಕ ನಿರ್ದೇಶಕರು ಈ ಬಗ್ಗೆ ಗಮನಹರಿಸಿ ತ್ವರಿತವಾಗಿ ಗುಣಮಟ್ಟದ ಕಾಮಗಾರಿ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಈಗ ಆರಂಭಗೊಂಡಿರುವ ಕಾಮಗಾರಿಗಳನ್ನು ಏನೇ ಸಮಸ್ಯೆ ಇದ್ದರೂ ನಿಗದಿತ ಅವಧಿ ಯೊಳಗೆ ಮುಗಿಸಬೇಕು. ಇನ್ನು ಮುಂದೆ ಸ್ಮಾರ್ಟ್‌ಸಿಟಿಯ ಯಾವುದೇ ಕಾಮಗಾರಿಗಳು ವಿಳಂಬವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು. ಸ್ಮಾರ್ಟ್‌ಸಿಟಿ ಯೋಜನೆಯಡಿ ಈಗಾಗಲೇ ಆರಂಭವಾಗಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸಬೇಕು ಎಂದು ಸಭೆ ಸೂಚನೆ ನೀಡಿತು.
ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ನಗರಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ನಿರ್ದೇಶಕರಾದ ಅಥಣಿ ಎಸ್. ವೀರಣ್ಣ, ದಿನೇಶ್ ಕೆ.ಶೆಟ್ಟಿ, ಡಾ|ಎಚ್. ಈರಮ್ಮ, ಮುರುಘರಾಜೇಂದ್ರ ಜೆ.ಚಿಗಟೇರಿ, ಡಾ|ಶಾಂತಾಭಟ್, ಮಂಜುಳಾ ಬಸವಲಿಂಗಪ್ಪ, ಎಂ.ನಾಗರಾಜ್, ವಿವಿಧ ಇಲಾಖೆ ಅ ಧಿಕಾರಿಗಳು ಹಾಗೂ ಹೈಡೆಕ್ ಸಂಸ್ಥೆ ಸಿಬ್ಬಂದಿ ಇದ್ದರು.