Advertisement

“ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ’

11:25 PM Mar 02, 2021 | Team Udayavani |

ಪುತ್ತೂರು: ನಗರಕ್ಕೆ 24 ತಾಸು ನೀರೊದಗಿಸುವ ನಿಟ್ಟಿನಲ್ಲಿ ಕೆಯುಐಡಿಎಫ್‌ಸಿ ಸಹಯೋಗದಲ್ಲಿ 113 ಕೋ. ರೂ. ವೆಚ್ಚದಲ್ಲಿ ಅನು ಷ್ಠಾನಗೊಂಡಿರುವ ಜಲಸಿರಿ ಯೋಜ ನೆಯ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ನಡೆಯಿತು.

Advertisement

ನಗರಸಭೆ ಸದಸ್ಯರು ವಿವಿಧ ಸಮಸ್ಯೆಗಳ ಬಗ್ಗೆ ಪ್ರಸ್ತಾವಿಸಿದರು. ಬಳಿಕ ಶಾಸಕರು, ಕಾಮಗಾರಿಗೆಂದು ತೆಗೆಯಲಾದ ಇಂಟರ್‌ಲಾಕ್‌ ಮರು ಅಳವಡಿಕೆಯಾಗದೆ, ಹೊಂಡ ಮುಚ್ಚದೆ ಜನರಿಗೆ ತೊಂದರೆ ಉಂಟಾಗಿರುವ ದೂರುಗಳು ಕೇಳಿ ಬಂದಿವೆ. ಅಗತ್ಯ ಕಾರ್ಮಿ ಕರನ್ನು ನಿಯೋಜಿಸಿ ಈ ಸಮಸ್ಯೆಯನ್ನು ತತ್‌ಕ್ಷಣ ಸರಿ ಪಡಿಸುವಂತೆ ಸೂಚಿಸಿ, ಗುಣಮಟ್ಟದ ಕಾಮಗಾರಿ ಯೊಂದಿಗೆ ನಿರೀಕ್ಷಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದರು.

ಸದಸ್ಯೆ ದೀಕ್ಷಾ ಪೈ ಪ್ರಸ್ತಾವಿಸಿ, ಕಾಮಗಾರಿಗೆಂದು ಹಲವರ ಮನೆ ಮುಂಭಾಗದ ಇಂಟರ್‌ಲಾಕ್‌ ತೆಗೆದಿದ್ದು, ಅದನ್ನು ಮರು ಜೋಡಣೆ ಮಾಡಿಲ್ಲ. ಎಲ್ಲ ಮನೆಗಳಿಗೆ ಮೀಟರ್‌, ಪೈಪ್‌ಲೈನ್‌ ಒದಗಿಸಿಲ್ಲ ಎಂದರು. ಉತ್ತರಿಸಿದ ಅಧಿಕಾರಿ ವಸಂತ್‌, ಲೆಡ್ಜರ್‌ನ ದಾಖಲೆಗಳ ಪ್ರಕಾರ ಮೀಟರ್‌, ಪೈಪ್‌ಲೈನ್‌ ಅಳವಡಿಸಲಾಗಿದೆ. ಬಾಕಿ ಇರುವ ಮನೆಗಳಿಗೆ ಎರಡನೆ ಹಂತದಲ್ಲಿ ಜೋಡಣೆ ಕಾರ್ಯ ನಡೆಯಲಿದೆ. ಈ ಬಗ್ಗೆ ಬೇಡಿಕೆ ಪಟ್ಟಿ ನೀಡುವಂತೆ ಹೇಳಿದರು.

ಸದಸ್ಯ ಜಗನ್ನಿವಾಸ್‌ರಾವ್‌ ಮಾತನಾಡಿ, ಜನರಿಗೆ ಮಾಹಿತಿ ನೀಡಿ ಕಾಮಗಾರಿ ಪ್ರಾರಂಭಿಸಬೇಕು. ಇದೊಂದು ದೊಡ್ಡ ಮೊತ್ತದ ಯೋಜನೆಯಾಗಿದ್ದು, ಅಷ್ಟೇ ಸಾಮರ್ಥ್ಯದ ಮಾನವ ಶ್ರಮವನ್ನು ಬಳಸಬೇಕು ಎಂದರು.

ಕಾರ್ಮಿಕ ಮಕ್ಕಳ ಬಗ್ಗೆ ನಿಗಾ ಇರಿಸಿ
ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾರ್ಮಿಕರ ಎಳೆಯ ಮಕ್ಕಳು ಬರುತ್ತಾರೆ. ಹೊಂಡ ನಿರ್ಮಾಣದಂಥ ಸ್ಥಳದಲ್ಲಿ ಅಪಾಯ ಕೂಡ ಹೆಚ್ಚು. ಹೀಗಾಗಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಅವರನ್ನು ನೋಡಿಕೊಳ್ಳಲು ಸಿಬಂದಿ ನೇಮಿಸಬೇಕು ಎಂದು ಜಗನ್ನಿವಾಸ ರಾವ್‌ ಸಲಹೆ ನೀಡಿದರು.

Advertisement

ನಗರಸಭೆ ಅಧ್ಯಕ್ಷ ಜೀವಂಧರ್‌ ಜೈನ್‌ ಮಾತನಾಡಿ, ಎರಡು ತಿಂಗಳ ಹಿಂದೆ ಕಾಮಗಾರಿ ಮಾಡಿದ ಸ್ಥಳದಲ್ಲಿ ಕೆಲಸ ಪೂರ್ತಿ ಆಗದ ಕಾರಣ ಜನರಿಗೆ ಸಮಸ್ಯೆ ಉಂಟಾಗಿದೆ. ವಾಹನ ಸಂಚಾರಕ್ಕೂ ತೊಂದರೆ ಆಗಿದೆ. ಈ ಬಗ್ಗೆ ದೂರು ಬಂದಿದೆ ಎಂದು ಪ್ರಸ್ತಾವಿಸಿದರು.

ಕಾಮಗಾರಿ ಅಪೂರ್ಣವಾದ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯ ಪಾಲಕ ಅಭಿಯಂತರ ಮಾದೇಶ್‌, ಈಗಾಗಲೇ ಹಲವು ದೂರುಗಳಿಗೆ ಸ್ಪಂದನೆ ನೀಡಲಾಗಿದೆ. ಎನ್‌ಜಿಒಗಳನ್ನು ನೇಮಿಸಿ ಮನೆ ಮನೆ ಭೇಟಿ ಮಾಡಿ ಮಾಹಿತಿ ನೀಡಲಾಗುವುದು. ಅಗತ್ಯ ಸಂದರ್ಭದಲ್ಲಿ ಜನರು 8748066111 ಸಹಾಯವಾಣಿ ಸಂಖ್ಯೆ ಸಂಪರ್ಕಿಸಬಹುದು ಎಂದರು.

ಉಪಾಧ್ಯಕ್ಷೆ ವಿದ್ಯಾಗೌರಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಪೌರಾಯುಕ್ತೆ ರೂಪಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

2022ರೊಳಗೆ ಪೂರ್ಣ
ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಾದೇಶ್‌ ಮಾತನಾಡಿ, 2019ರಲ್ಲಿ ಯೋಜನೆ ಅನುಷ್ಠಾನಕ್ಕೆ ಬಂದಿದ್ದು 2022ರಲ್ಲಿ ಪೂರ್ಣಗೊಳ್ಳಲಿದೆ. ಕಾಮಗಾರಿ ಪೂರ್ಣಕ್ಕೆ 36 ತಿಂಗಳ ಅವಧಿ ನೀಡಲಾಗಿದೆ. ಕಾಮಗಾರಿ ಪೂರ್ಣಗೊಂಡ ಅನಂತರ ಎಂಟು ವರ್ಷಗಳ ಕಾಲ ಅನುಷ್ಠಾನ ಸಂಸ್ಥೆಯೇ ನಿರ್ವಹಣೆ ಮಾಡಲಿದೆ. ನೆಕ್ಕಿಲಾಡಿಯಿಂದ ನಗರಕ್ಕೆ ಕೊಳವೆಬಾವಿ ಮೂಲಕ ನೀರು ಹಾಯಿಸಿ ಟ್ಯಾಂಕ್‌ ಮೂಲಕ ಸಂಗ್ರಹಿಸಿ ಮನೆ ಮನೆಗೆ ಪೂರೈಸುವ ಯೋಜನೆ ಇದಾಗಿದ್ದು, ಈಗಾಗಲೇ 150 ಕಿ.ಮೀ. ದೂರದ ಯೋಜನೆಯಡಿ 104 ಕಿ.ಮೀ. ಪೈಪ್‌ ಲೈನ್‌ ಕಾಮಗಾರಿ ಆಗಿದೆ. 44 ಕಿ.ಮೀ. ದೂರ ಟೆಸ್ಟಿಂಗ್‌ ಆಗಿದೆ. ಶುದ್ಧೀಕರಣ ಘಟಕ, ಟ್ರಾನ್ಸ್‌ಫಾರ್ಮರ್‌, ಪಂಪ್‌ ಅಳವಡಿಕೆ ಮೊದಲಾದ ಕಾಮಗಾರಿಗಳು ನಡೆಯಲಿವೆ. 7 ಕಡೆಗಳಲ್ಲಿ ಟ್ಯಾಂಕ್‌ ನಿರ್ಮಾಣವಾಗಲಿದ್ದು, ಇದರಲ್ಲಿ 1 ಗ್ರೌಂಡ್‌ ಲೆವೆಲ್‌ ಟ್ಯಾಂಕ್‌ ಸೇರಿದೆ ಎಂದು ಯೋಜನೆ ಬಗ್ಗೆ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next