ಕುಷ್ಟಗಿ: ಪ್ರಸಕ್ತ ಮುಂಗಾರು ಪೂರ್ವ ಬೆಳೆ ಸಮೀಕ್ಷೆಯನ್ನು ಸೂಕ್ತ ರೀತಿಯಲ್ಲಿ ದಾಖಲಿಸಿಕೊಳ್ಳಲು 136 ಪಿಆರ್‌ಒಗಳಿಗೆ ಸೂಕ್ತ ತರಬೇತಿ ನೀಡಲಾಗಿದ್ದು, ಜು.28ರಿಂದ ಸಮೀಕ್ಷಾ ಕಾರ್ಯ ಆ.14ರವರೆಗೂ ನಡೆಯಲಿದೆ ಎಂದು ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ತಿಳಿಸಿದರು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಬೆಳೆ ಸಮೀಕ್ಷಾ ತಂಡದ ಕಂದಾಯ, ಕೃಷಿ ಇಲಾಖೆ, ತೋಟಗಾರಿ ಇಲಾಖೆ ಹಾಗೂ ರೇಷ್ಮೆ ಇಲಾಖಾ ಅಧಿಕಾರಿಗಳ ನೇತೃತ್ವದ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ 114 ಗ್ರಾಮಗಳಲ್ಲಿ ಜು.28ರಿಂದ ಆ.14ವರೆಗೆ 75,993 ಪ್ಲಾಟ್ ಗಳ ಸರ್ವೇ ಕಾರ್ಯ ನಡೆಯಲಿದೆ. ಈ ಸಮೀಕ್ಷಾ ಕಾರ್ಯ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ಈ ಕೆಲಸಕ್ಕೆ 136 ಪಿಆರ್‌ಒ ಖಾಸಗಿ ಸಮೀಕ್ಷಕರನ್ನು ನಿಯೋಜಿಸಿಕೊಂಡಿದ್ದು, ಸಮೀಕ್ಷಾ ಕಾರ್ಯದಲ್ಲಿ ಮೊಬೈಲ್ ಆ್ಯಪ್ ಮೂಲಕ ಪ್ರತಿ ಪ್ಲಾಟ್‌ಗೆ ಹೋಗಿ ಜಿಎಪಿಎಸ್ ಆಧಾರದ ಮೇರೆಗೆ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಬೇಕು ಎಂದರು.
ಸಮೀಕ್ಷಕರಿಗೆ 10 ರೂ. ಗೌರವಧನ ನೀಡಲಾಗುತ್ತಿದೆ. ಈಗಾಗಲೇ ಸಮೀಕ್ಷರಿಗೆ ಉಪಗ್ರಹ ಆಧಾರಿತ ತರಬೇತಿ ನೀಡಲಾಗಿದ್ದು, ಹೋಬಳಿಗೆ ಒಬ್ಬರಂತೆ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಹೋಬಳಿಗೆ ನೋಡಲ್ ಅಧಿಕಾರಿ ನಿಯೋಗಿಸಲಾಗಿದೆ. ತಾ.ಪಂ ಇಒ ತಾವರಗೇರಾ ಹೋಬಳಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಂ. ರಮೇಶ ಹನುಮನಾಳ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವ ಹನುಮಸಾಗರ ಹೋಬಳಿ ಹಾಗೂ ಕುಷ್ಟಗಿ ಹೋಬಳಿಗೆ ತಹಶೀಲ್ದಾರರನ್ನು ನೇಮಿಸಲಾಗಿದೆ. ಪಿಆರ್‌ಒಗಳು ಕೆಲಸದ ದಿನಗಳಲ್ಲಿ ಸಮೀಕ್ಷಾ ಕಾರ್ಯದಲ್ಲಿ ಗಮನ ಹರಿಸಬೇಕು. ತಾಂತ್ರಿಕ ದೋಷಗಳಿದ್ದರೆ ಮಾಸ್ಟರ್ ಟ್ರೇನರ್ ಸಮಸ್ಯೆ ಬಗೆಹರಿಸುವವರು. ಅವರಿಂದಲೂ ಸಮಸ್ಯೆ ಬರೆಹರಿಯದೇ ಇದ್ದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾದಲ್ಲಿರುವ ಸಲಹೆಗಾರರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಸಹಾಯಕ ಕೃಷಿ ಇಲಾಖೆ ಸಹಾಯ ನಿರ್ದೇಶಕ ಮಹಾದೇವ, ತಾ.ಪಂ ಇಒ ಕೆ.ತಿಮ್ಮಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವ, ಗ್ರೇಡ್-2 ತಹಶೀಲ್ದಾರ ವಿಜಯಾ, ಶಿರೆಸ್ತೇದಾರ ಸತೀಶ, ರೇಷ್ಮೆ ಇಲಾಖೆಯ ಅಧಿಕಾರಿಗಳು ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಕೃಷಿ ಅಧಿಕಾರಿಗಳು ಭಾಗವಹಿಸಿದ್ದರು.