Advertisement

ಭೂ ಸ್ವಾಧೀನ-ಪರಿಹಾರ ಪಾವತಿ ಪೂರ್ಣಗೊಳಿಸಿ

06:19 PM Sep 23, 2021 | Team Udayavani |

ಹಾಸನ: ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಬಾಕಿ ಉಳಿದಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಪರಿಹಾರ ವಿತರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ವಿಶೇಷ ಭೂ ಸ್ವಾಧೀನಾಧಿಕಾರಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಎತ್ತಿನಹೊಳೆ ಯೋಜನೆಯ ಕಾಮಗಾರಿ ಕುರಿತಾದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. ಗುರುತ್ವಾಕರ್ಷಣೆ ಕಾಲುವೆಯ 92 ಗ್ರಾಮಗಳ ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆ, ಭೂ ಪರಿಹಾರ ವಿತರಣೆ ಕಾರ್ಯ ತ್ವರಿತವಾಗಿ ಮುಗಿಸಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಹೇಳಿದರು.

ಕ್ರಮ ಕೈಗೊಳ್ಳಿ: ಎತ್ತಿನಹೊಳೆ ಯೋಜನೆ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿಸಿದ ಸಣ್ಣಸಣ್ಣ ಸಮಸ್ಯೆ ಗಳನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ತುರ್ತಾಗಿ ಬಗೆಹರಿಸಿಕೊಳ್ಳಬೇಕು. ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅವಾರ್ಡ್‌ ಪಾಸಾದ ತಕ್ಷಣ ರೈತರಿಗೆ ನೋಟಿಸ್‌ ನೀಡಿ ಭೂ ಪರಿಹಾರ ಪಾವತಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸರ್ವೆ ಪೂರ್ಣಗೊಳಿಸಿ: ಸಕಲೇಶಪುರ ತಾಲೂಕು ಹಾನುಬಾಳು ಹೋಬಳಿ ಕಾಡುಮನೆ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಗೆ ಬೇಕಾಗಿರುವ ಅರಣ್ಯ ಇಲಾಖೆಯ ಭೂಮಿ ಹಾಗೂ ಖಾಸಗಿ ಭೂಮಿ ಗೊಂದಲ ಪರಿಶೀಲಿಸಿ ಬಗೆಹರಿಸಬೇಕು. ಬೇಲೂರು ತಾಲೂಕು ಹಳೇಬೀಡು ಹೋಬಳಿಯ ಐದಳ್ಳ ಕಾವಲು ಗ್ರಾಮದ ಬಳಿ ಎತ್ತಿನಹೊಳೆ ನಾಲಾ ಕಾಮಗಾರಿಗೆ ಅಗತ್ಯವಿರುವ ಭೂಮಿಗೆ ಸಂಬಂಧಿಸಿದಂತೆ ಜಂಟಿ ಸರ್ವೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.

ಇದನ್ನೂ ಓದಿ:ದಿಢೀರ್ ರದ್ದಾದ ಪಂದ್ಯ; 27 ಲಕ್ಷ ರೂ. ಬಿರಿಯಾನಿ ಬಿಲ್…ಕಂಗಾಲಾದ ಪಾಕ್ ಕ್ರಿಕೆಟ್ ಮಂಡಳಿ

Advertisement

ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಸ್ವಾಧೀನಪಡಿಸಿಕೊಂಡಿರುವ ಭೂಮಿ ರೈತರಿಗೆ ಪರಿಹಾರ ಹಣ ಪಾವತಿಗೆ ಅಗತ್ಯವಿರುವ ದಾಖಲೆ ನೀಡುವಲ್ಲಿ ವಿಳಂಬವಾಗದಂತೆ ಕ್ರಮ ಕೈಗೊಳ್ಳಿ. ಭೂ ಸ್ವಾಧೀನ ವ್ಯಾಪ್ತಿಗೆ ಒಳಪಡುವ ಮರ ಕಡಿಯಲು ಅರಣ್ಯ ಇಲಾಖೆ ಕಾಲಮಿತಿಯೊಳಗೆ ಪರಿಶೀಲಿಸಿ ತ್ವರಿತವಾಗಿ ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ಮಾತನಾಡಿ, ಎತ್ತಿನಹೊಳೆ ಯೊಜನೆ ಕಾಮಗಾರಿಗೆ ಅಗತ್ಯವಿರುವ ಮರ ಕಟಾವಿಗೆ ತ್ವರಿತವಾಗಿ ಅನುಮತಿ ನೀಡಲಾಗುವುದು ಹಾಗೂ ಅರಣ್ಯ ಇಲಾಖೆ ವತಿಯಿಂದ ಅಗತ್ಯವಿರುವ ಸಹಕಾರವನ್ನು ವಿಳಂಬವಿಲ್ಲದೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಎತ್ತಿನಹೊಳೆ ಯೋಜನೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಆನಂದ್‌ ಕುಮಾರ್‌, ಭೂ ದಾಖಲೆಗಳ ಉಪನಿರ್ದೇಶಕಿ ಹೇಮಲತಾ, ಎತ್ತಿನಹೊಳೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಕಲ್ಪಶ್ರೀ ಯೋಜನೆ ಕಾಮಗಾರಿ ವಿಳಂಬಕ್ಕೆ ಆಗುತ್ತಿರುವ ಕಾರಣ ಹಾಗೂ ಆಗತ್ಯವಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.

ಭೂ ಪರಿಹಾರ ನಿಗದಿ ಐತೀರ್ಪು ಪ್ರಕರಣಗಳಲ್ಲಿ ಪರಿಹಾರ ಪಾವತಿಯಾಗದ ಉಳಿದ ಮೊತ್ತವನ್ನು ನ್ಯಾಯಾಲಯದಲ್ಲಿ ಜಮೆ ಮಾಡಿ ಕಾಮಗಾರಿ ಕೈಗೆತ್ತಿಕೊಂಡುಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಅಡಚರಣೆ ಯಾಗುತ್ತಿರುವ ಸಮಸ್ಯೆಗಳ ಕುರಿತು ತಾಲೂಕು ಹಂತ ಹಾಗೂ ಜಿಲ್ಲಾ ಹಂತದಲ್ಲಿಯೂ ಸಭೆ ನಡೆಸಬೇಕು.
-ಆರ್‌.ಗಿರೀಶ್‌, ಜಿಲ್ಲಾಧಿಕಾರಿ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next