Advertisement

2020 ರ ವೇಳೆಗೆ ಸಂಪೂರ್ಣ ಸಂಸ್ಕರಣೆ

11:38 AM Nov 12, 2017 | Team Udayavani |

ಬೆಂಗಳೂರು: ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯನೀರನ್ನು 2020ರ ವೇಳೆಗೆ ಸಂಪೂರ್ಣವಾಗಿ ಸಂಸ್ಕರಿಸುವ ವ್ಯವಸ್ಥೆ ಸಿದ್ಧವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ಜಲಮಂಡಳಿಯಿಂದ ಬೆಳ್ಳಂದೂರು ಬಳಿಯ ಅಮಾನಿಕೆರೆ ಸುತ್ತಮುತ್ತಲಿನ ಭಾಗಗಳಲ್ಲಿ ನಿರ್ಮಿಸಿ ರುವ 136 ಎಂಎಲ್‌ಡಿ ತ್ಯಾಜ್ಯನೀರು ಸಂಸ್ಕರಣಾ ಘಟಕಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ನಿತ್ಯ 1800 ಎಂಎಲ್‌ಡಿ ನೀರು ಬಳಕೆಯಾಗುತ್ತಿದೆ. ಆ ಪೈಕಿ 1440 ಎಂಎಲ್‌ಡಿ ತ್ಯಾಜ್ಯನೀರು ಉತ್ಪತ್ತಿಯಾಗುತ್ತಿದ್ದು, 982 ಎಂಎಲ್‌ಡಿ ಸಂಸ್ಕರಿಸಲಾಗುತ್ತಿದೆ ಎಂದರು.

ತ್ಯಾಜ್ಯ ನೀರಿನ ಸಂಪೂರ್ಣ ಸಂಸ್ಕರಣೆ ಉದ್ದೇಶದಿಂದ 1,500 ಕೋಟಿ ರೂ. ವೆಚ್ಚದಲ್ಲಿ 440 ದಶಲಕ್ಷ ಲೀ. ಸಾಮರ್ಥ್ಯದ ಘಟಕಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 2020ರ ವೇಳೆಗೆ 1577 ಎಂಎಲ್‌ಡಿ ತ್ಯಾಜ್ಯನೀರು ಸಂಸ್ಕರಣೆಯಾಗಿದ್ದು, ನಗರದ ಪರಿಸರ ಉತ್ತಮವಾಗಲಿದೆ. ಸಂಸ್ಕರಣಾ ಘಟಕಗಳಲ್ಲಿ ಶುದ್ಧೀಕರಿಸಿದ ನೀರಿನಿಂದ ಕೋಲಾರದ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ. ಅದೇ ರೀತಿ ಹೆಬ್ಟಾಳ ಕಣಿವೆಯಿಂದ ಚಿಕ್ಕಬಳ್ಳಾಪುರ ಹಾಗೂ ಆನೇಕಲ್‌ ಕೆರೆಗಳಿಗೂ ಸಂಸ್ಕರಿಸಿದ ನೀರು ಪೂರೈಸಲಾಗುವುದು ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಎಚ್‌.ಡಿ.ಕುಮಾರ ಸ್ವಾಮಿ ಅವರು ಬಿಬಿಎಂಪಿ ವ್ಯಾಪ್ತಿಗೆ
ಅವೈಜ್ಞಾನಿಕವಾಗಿ 110 ಹಳ್ಳಿಗಳು, ನಗರಸಭೆ, ಪುರಸಭೆ ಸೇರಿಸಿದ್ದು, ಯಾವುದೇ ರೀತಿಯ ಮೂಲಸೌಕರ್ಯಗಳನ್ನು ಒದಗಿಸಲು ಮುಂದಾಗಿಲ್ಲ. ಇದೀಗ ಆಡಳಿತದ ದೃಷ್ಟಿಯಿಂದ ಬೆಂಗಳೂರನ್ನು ಮೂರು ಭಾಗ ಮಾಡಲು ಮುಂದಾದರೆ ವಿರೋಧಿಸುತ್ತಾರೆ. ಇನ್ನು ಬಿಜೆಪಿಯವರು ಜಾರಿಗೊಳಿಸಿದ ಅಕ್ರಮ-ಸಕ್ರಮ ಯೋಜನೆ ಜಾರಿಗೆ ಮುಂದಾದರೆ, ಸಂಸದ ರಾಜೀವ್‌ ಚಂದ್ರಶೇಖರ್‌ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾವೇರಿ 5ನೇ ಹಂತದ ಮಾತುಕತೆ: 110 ಹಳ್ಳಿಗಳಲ್ಲಿ ಒಳಚರಂಡಿ ನಿರ್ಮಿಸಲು 1000 ಕೋಟಿ ರೂ. ಮೊತ್ತದ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತದಲ್ಲಿ 77.5 ಕೋಟಿ ಲೀಟರ್‌ ನೀರು ಪೂರೈಕೆ ಮಾಡಲು ಜೈಕಾ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ್ದು, ಯೋಜನೆ ಜಾರಿಗೆ 5,500 ಕೋಟಿ ರೂ. ವೆಚ್ಚವಾಗಲಿದ್ದು, ಜೈಕಾದೊಂದಿಗೆ ಒಪ್ಪಂದ ಮಾಡಿಕೊಂಡು ಕಾಮಗಾರಿಗೆ ಚಾಲನೆ ನೀಡುತ್ತೇವೆ. ಜತೆಗೆ ಪೂರ್ವ-ಪಶ್ಚಿಮ, ಉತ್ತರ – ದಕ್ಷಿಣ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸಲು 25 ಸಾವಿರ ಕೋಟಿ ರೂ. ಅಗತ್ಯವಿದೆ. ಇನ್ನು 2ನೇ ಹಂತ ಮೆಟ್ರೋ ಕಾಮಗಾರಿ ಪೂರ್ಣಗೊಂಡರೆ ನಗರದಲ್ಲಿನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಸಚಿವ ಕೆ.ಜೆ.ಜಾರ್ಜ್‌, ಶಾಸಕ ಅರವಿಂದ ಲಿಂಬಾವಳಿ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಹಾಗೂ ಇತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next