Advertisement
ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಿದಂತೆ ಹೊರ ಹರಿವು ಹೆಚ್ಚಾಗತೊಡಗಿದೆ. ಕಂಪ್ಲಿ-ಕೋಟೆಯ ಸೇತುವೆ ಮುಳುಗಡೆಯಾಗಿದ್ದು ನದಿ ಪಾತ್ರದ ಬಹುತೇಕ ಜಮೀನುಗಳು ಜಲಾವೃತಗೊಂಡಿವೆ.
ಕೋಟೆಯ ಪ್ರಸನ್ನ ವೆಂಕಟರಮಣ ದೇವಸ್ಥಾನ, ಹೊಳೆ ಆಂಜನೇಯಸ್ವಾಮಿ ದೇವಸ್ಥಾನ, ಐತಿಹಾಸಿಕ ಕೋಟೆ ಜಲಾವೃತಗೊಂಡಿದ್ದು, ಕೋಟೆ ಪ್ರದೇಶದ ಬಹುತೇಕ ಮಾರ್ಗಗಳ ಸಂಚಾರ ಕಡಿತಗೊಂಡಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿರುವುದರಿಂದ ನದಿ ಪಾತ್ರದ ಜನರು ಮುಂಜಾಗ್ರತೆ ವಹಿಸುವಂತೆ ತಾಲೂಕು ಆಡಳಿತ ಮನವಿ ಮಾಡಿದೆ. ಕಂಪ್ಲಿ-ಕೋಟೆಯ ಸೇತುವೆ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ಕಂಪ್ಲಿಯಿಂದ ಗಂಗಾವತಿಗೆ ತೆರಳುವ ಸೇತುವೆ ಮೇಲಿನ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕಂಪ್ಲಿಯಲ್ಲಿ ಬಸ್, ಲಾರಿ ಸೇರಿದಂತೆ ಇತರೆ ವಾಹನಗಳನ್ನು ಹೊಸಪೇಟೆ ಮಾರ್ಗವಾಗಿ ತೆರಳುವಂತೆ ಸೂಚಿಸಲಾಗಿದೆ. ವಾಹನಗಳು ಬುಕ್ಕಸಾಗರದ ನೂತನ ಸೇತುವೆ ಮೇಲೆ ಸಂಚರಿಸುತ್ತಿವೆ.
ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟಿರುವುದರಿಂದ ಕೋಟೆಯ ದಂಡೆಯಲ್ಲಿನ ಸುಮಾರು 6ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಈ ಆರು ಮೀನುಗಾರ ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಕೋಟೆಯ ಸರ್ಕಾರಿ ಶಾಲೆಯಲ್ಲಿ ವಸತಿ ಕಲ್ಪಿಸಲಾಗಿದೆ.
Related Articles
Advertisement
ಕೋಟೆಯ ಬಹುತೇಕ ದೇವಸ್ಥಾನಗಳು ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ನಾಗರ ಪಂಚಮಿ ಹಬ್ಬದ ನಿಮಿತ್ತ ಹಾಲೆರೆಯಲು ಸಾರ್ವಜನಿಕರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಹರಿಗೋಲು ಮಾಲೀಕ ಹಸೇನಪ್ಪ ದೇವಸ್ಥಾನಕ್ಕೆ ತೆರಳುವಎಲ್ಲ ಭಕ್ತರನ್ನು ಉಚಿತವಾಗಿ ತಮ್ಮ ಹರಿಗೋಲಿನಲ್ಲಿ ದೇವಸ್ಥಾನಗಳಿಗೆ ಕರೆದುಕೊಂಡು ಹೋಗುವ ಮೂಲಕ ಸಹಕರಿಸಿದರು.