ಮಂಗಳೂರು: ಕ್ಷೇತ್ರದ ಜನರಿಗೆ ನಾನು ಸಚಿವನಾಗಬೇಕು ಎನ್ನುವ ಬೇಡಿಕೆ ಇರಬಹುದು. ಆದರೆ ಸ್ಪೀಕರ್ ಸ್ಥಾನ ಸಚಿವ ಸ್ಥಾನಕ್ಕಿಂತ ಮಹತ್ವದ್ದು. ಸಚಿವನಾದರೆ ಒಂದೇ ಇಲಾಖೆಗೆ; ಈಗ ಎಲ್ಲ ಇಲಾಖೆಗಳು ನನ್ನ ವ್ಯಾಪ್ತಿಗೆ ಬರುತ್ತವೆ. ಜನರಿಗೆ ಯಾವ ಕೆಲಸ ಆಗಬೇಕೋ ಆಯಾ ಇಲಾಖೆಯ ಸಚಿವರ ಜತೆ ಮಾತುಕತೆ ನಡೆಸಿ ಕಾರ್ಯಗತಗೊಳಿಸುತ್ತೇನೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.
ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ದ.ಕ. ಜಿಲ್ಲೆÉಗೆ ಆಗಮಿಸಿದ ಅವರು ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದರು.
ವಿಧಾನ ಸಭೆಯಲ್ಲಿ ದ್ವೇಷ, ಆವೇಶ ಇಲ್ಲದೆ ಹಿರಿಯ, ಕಿರಿಯ ಸದಸ್ಯರ ವಿಶ್ವಾಸದೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ನೆಮ್ಮದಿಯ ಬದುಕು ನಡೆಸಲು ಬೇಕಾಗಿರುವ ಚರ್ಚೆ ಹಾಗೂ ಅದಕ್ಕೆ ಪೂರಕವಾಗಿರುವ ಫಲಿತಾಂಶವನ್ನು ತರಲು ಪೂರಕವಾದ ವಾತಾವರಣ ಸೃಷ್ಟಿ ಮಾಡಲು ಪ್ರಯತ್ನ ಮಾಡುತ್ತೇನೆ ಎಂದರು.
ಸಭಾಧ್ಯಕ್ಷ ಆದ ಬಳಿಕ ಪ್ರೋಟೋಕಾಲ್ ಅಂತ ಏನಿಲ್ಲ. ಜನರ ಪ್ರೀತಿಯೇ ನನಗೆ ಪ್ರೋಟೋಕಾಲ್. ಸಾಮಾನ್ಯ ಜನರು ನನ್ನನ್ನು ತಲುಪಲು ಅವಕಾಶ ಮಾಡಿಕೊಡಿ ಎಂದು ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ ಎಂದರು.
Related Articles
ಹೊಸ ಶಾಸಕರಿಗೆ ಅವಕಾಶಕ್ಕೆ ಆದ್ಯತೆ
ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿ ಬಂದಿರುವ ಶಾಸಕರಿಗೆ ಮೂರು ದಿನಗಳ ತರಬೇತಿ ಆಯೋಜಿಸಲಾಗುತ್ತದೆ. ಅಲ್ಲದೆ ವಿಧಾನಮಂಡಲದಲ್ಲಿ ಹೊಸ ಶಾಸಕರಿಗೆ ಅವಕಾಶ ನೀಡಲು ಆದ್ಯತೆ ನೀಡುವುದಾಗಿ ತಿಳಿಸಿದರು.
ಹಿಜಾಬ್ ಸೇರಿದಂತೆ ಹಿಂದಿನ ಸರಕಾರ ತಂದ ವಿವಿಧ ಯೋಜನೆಗಳನ್ನು ಹೊಸ ಸರಕಾರ ಬಂದ ಬಳಿಕ ತೆಗೆಯಲಾಗುತ್ತದೆಯೇ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಖಾದರ್, ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಸ್ಪೀಕರ್ ಹುದ್ದೆ ಅಲಂಕರಿಸಿದ್ದೇನೆ. ಈಗ ನನ್ನ ವಿಧಾನಸಭಾ ವ್ಯಾಪ್ತಿ ಹಾಗೂ ನನ್ನ ಸಭಾಧ್ಯಕ್ಷತೆಯ ವ್ಯಾಪ್ತಿಯ ವಿಚಾರದಲ್ಲಿ ಮಾತ್ರ ಮಾತನಾಡಬಹುದು ಎಂದರು.