Advertisement

ದೂರು ಪ್ರಾಧಿಕಾರದ್ದೇ ದೊಡ್ಡ ದೂರು!

05:44 PM Jun 27, 2022 | Team Udayavani |

ಬಾಗಲಕೋಟೆ: ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ನಾಗರಿಕರಿಗೂ ಸರ್ಕಾರದ ಎಲ್ಲ ರೀತಿಯ ಮೂಲಭೂತ ಸೌಲಭ್ಯ ದೊರೆಯಬೇಕು. ಅದರ ಉಸ್ತುವಾರಿ ನೋಡಿಕೊಳ್ಳಲು ಅಥವಾ ಸೌಲಭ್ಯ ದೊರೆಯದಿದ್ದರೆ ಅದನ್ನು ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದು, ಸಮಸ್ಯೆ ಪರಿಹರಿಸಲು ಸರ್ಕಾರ, ಕುಂದು-ಕೊರತೆ ನಿವಾರಣೆ ಹೊಸ ಪ್ರಾಧಿಕಾರ ಆರಂಭಗೊಂಡಿದೆ.

Advertisement

ಹೌದು, ರಾಜ್ಯ ಸರ್ಕಾರ, ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993 (296-ಎ) ಅಡಿಯಲ್ಲಿ ಪ್ರತಿಯೊಬ್ಬರಿಗೂ ಮಾನವ ಹಕ್ಕುಗಳು ದೊರೆಯಬೇಕು ಎಂಬುದು ಸರ್ಕಾರದ ಗುರಿ. ಹೀಗಾಗಿ ಬಾಗಲಕೋಟೆಯಲ್ಲೂ ಈ ಹೊಸ ಪ್ರಾಧಿಕಾರದ ಕಚೇರಿ ಆರಂಭಗೊಂಡಿದ್ದು, ಬೆಳಗಾವಿ ವಿಭಾಗಕ್ಕೆ ಓರ್ವ ನಿವೃತ್ತ ಹಿರಿಯ ಅಧಿಕಾರಿಯನ್ನು ಸಾರ್ವಜನಿಕ ಕುಂದು ಕೊರತೆ ನಿವಾರಣೆ ಪ್ರಾಧಿಕಾರಕ್ಕೆ ನೇಮಕ ಮಾಡಲಾಗಿದೆ. ಇದಕ್ಕಾಗಿ ಜಿಪಂ ಕಚೇರಿ ಆವರಣದಲ್ಲಿ ಹೊಸ (ಉಪಾಧ್ಯಕ್ಷರ ಕೊಠಡಿ) ಕಚೇರಿಯನ್ನೂ ಆರಂಭಿಸಲಾಗಿದೆ.

ಕಳೆದ ತಿಂಗಳು ಈ ಹೊಸ ಪ್ರಾಧಿಕಾರ ಮತ್ತು ಅದಕ್ಕೊಂದು ಹೊಸ ಕಚೇರಿಯನ್ನೂ ಆರಂಭಿಸಿದ್ದು, ಪ್ರಾಧಿಕಾರಕ್ಕೆ ನೇಮಕವಾದ ನಿವೃತ್ತಿ ಅಧಿಕಾರಿ, ಈವರೆಗೂ ಜಿಲ್ಲೆಗೆ ಭೇಟಿ ನೀಡಿಲ್ಲ. ಈ ಪ್ರಾಧಿಕಾರದ ರೀತಿ-ನೀತಿ-ನಿಯಮಗಳ ಬಗ್ಗೆ ಸಿಬ್ಬಂದಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಇದು ಆರಂಭಗೊಂಡು ಒಂದು ತಿಂಗಳಾದರೂ ಈವರೆಗೂ ಒಂದೂ ದೂರು ಬಂದಿಲ್ಲ. ಮುಖ್ಯವಾಗಿ, ಈ ಪ್ರಾಧಿಕಾರ ಆರಂಭಗೊಂಡಿರುವ ಕುರಿತೇ, ಸೌಲಭ್ಯ ವಂಚಿತ ಜನರಿಗೆ ಗೊತ್ತಿಲ್ಲ ಎನ್ನಲಾಗಿದೆ.

ಏನಿದು ಪ್ರಾಧಿಕಾರ? ಗ್ರಾಮೀಣ ಭಾಗದ ಪ್ರತಿಯೊಬ್ಬ ಅರ್ಹ ನಾಗರಿಕರು, ಕುಡಿಯುವ ನೀರು, ಆರೋಗ್ಯ ಸೇವೆ, ರಸ್ತೆ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ಸ್ವತ್ಛತೆ, ವಿವಿಧ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ, ಯೋಜನೆಗಳ ಹಂಚಿಕೆ, ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಮಂಜೂರು ಮಾಡುವ ಯೋಜನೆಗಳು, ಅನುದಾನ ಹಂಚಿಕೆ ಅಥವಾ ಹೊರಡಿಸುವ ವಿವಿಧ ಪ್ರಮಾಣ ಪತ್ರ, ದಾಖಲೆಗಳು ದೊರೆಯಬೇಕು. ಈ ಯೋಜನೆಗಳಲ್ಲಿ ಲೋಪ ಕಂಡುಬಂದರೆ, ಜನರಿಗೆ ಸಮರ್ಪಕವಾಗಿ ಸೌಲಭ್ಯ ದೊರೆಯದಿದ್ದರೆ, ಹೊಸದಾಗಿ ರಚನೆಯಾದ ಸಾರ್ವಜನಿಕ ಕುಂದು ಕೊರತೆ ನಿವಾರಣೆ ಪ್ರಾಧಿಕಾರಕ್ಕೆ ದೂರು ಸಲ್ಲಿಸಬೇಕು. ಅದನ್ನು ಪ್ರಾಧಿಕಾರದ ಅಧಿಕಾರಿ-ಸಿಬ್ಬಂದಿ ಸಂಬಂಧಿಸಿದ ಇಲಾಖೆಯೊಂದಿಗೆ ಪತ್ರ ವ್ಯವಹಾರ ಮಾಡಿ, ಸೌಲಭ್ಯ ದೊರಕಿಸುವಂತೆ ಮಾಡುತ್ತದೆ.

ಈ ಪ್ರಾಧಿಕಾರದಡಿ ಭ್ರಷ್ಟಾಚಾರ, ಆಡಳಿತಾತ್ಮಕ, ಅವ್ಯವಹಾರ, ನರೇಗಾ ಯೋಜನೆ ಹೀಗೆ ಕೆಲ ವಿಷಯಗಳು ಬರುವುದಿಲ್ಲ. ಬದಲಾಗಿ ಸೌಲಭ್ಯಗಳ ಹಂಚಿಕೆಯಲ್ಲಿ ವಿಳಂಬವಾದರೆ, ಸೌಲಭ್ಯಗಳೇ ದೊರೆಯದಿದ್ದರೆ ಅಂತಹ ಜನರು, ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು. ದೂರು ಸಲ್ಲಿಸಲೆಂದೇ ಒಂದು ನಿಗದಿ ಅರ್ಜಿ ಮಾಡಿದ್ದು, ಅದರಡಿಯೇ ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿದರೆ, ಅದನ್ನು ಪ್ರಾಧಿಕಾರ ಮುಂದಿನ ಕ್ರಮ ಕೈಗೊಳ್ಳಲಿದೆ.

Advertisement

ದೂರು ಪ್ರಾಧಿಕಾರದ್ದೇ ದೊಡ್ಡ ದೂರು: ಹೊಸದಾಗಿ ಆರಂಭಗೊಂಡ ಈ ದೂರು ಪ್ರಾಧಿಕಾರದ್ದೇ ದೊಡ್ಡ ದೂರು ಜಿಲ್ಲೆಯ ಜನರಲ್ಲಿದೆ. ಸಾರ್ವಜನಿಕರಿಗೆ ಉಪಯುಕ್ತವಾಗುವ ಇಂತಹ ಒಂದು ಪ್ರಾಧಿಕಾರ ಆರಂಭಗೊಂಡಿರುವುದು ಜನರಿಗೆ ಗೊತ್ತಿಲ್ಲ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕಾಗಿ ಇರುವ ಪ್ರಾಧಿಕಾರದ ಕುರಿತು ಎಲ್ಲೆಡೆ ಪ್ರಚಾರಪಡಿಸಬೇಕಿತ್ತು. ಒಂದು ತಿಂಗಳಾದರೂ ಒಂದೂ ಅರ್ಜಿ ಬಂದಿಲ್ಲವೆಂದರೆ ಜಿಲ್ಲೆಯಲ್ಲಿ ಸಮಸ್ಯೆಗಳೇ ಇಲ್ಲವೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಇಂದೇ ದೂರು ಕೊಡಿ: ಜಿ.ಪಂ. ಕಚೇರಿ ಆವರಣದ ಉಪಾಧ್ಯಕ್ಷರ ಕೊಠಡಿಯನ್ನೇ ಈ ನೂತನ ಪ್ರಾಧಿಕಾರದ ಕಚೇರಿಯನ್ನಾಗಿ ಮಾಡಲಾಗಿದ್ದು, ಜಿ.ಪಂ. ಸಿಬ್ಬಂದಿಯೊಬ್ಬರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಯಾವುದೇ ಗ್ರಾ.ಪಂ ವ್ಯಾಪ್ತಿಯ ಜನರು, ಅರ್ಹ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಾಧಿಕಾರಕ್ಕೆ ನಿಯೋಜನೆಗೊಂಡ ಜಿಪಂ ಸಿಬ್ಬಂದಿ ತಿಳಿಸಿದರು.

ಸರ್ಕಾರದ ಯೋಜನೆಗಳ ಹಂಚಿಕೆ ಹಾಗೂ ಸೌಲಭ್ಯ ಕಲ್ಪಿಸುವಲ್ಲಿ ವಿಳಂಬ ಅಥವಾ ಅರ್ಹರನ್ನು ಕೈಬಿಟ್ಟಿದ್ದರೆ, ಹಳ್ಳಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲೂ ತೊಂದರೆಯಾಗಿದ್ದರೆ ದೂರು ಸಲ್ಲಿಸಲು ಅವಕಾಶವಿದೆ. ಆದರೆ, ಇಂತಹವೊಂದು ಜನೋಪಯೋಗಿ ಪ್ರಾಧಿಕಾರ, ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಇದಕ್ಕೆ ನೇಮಕಗೊಂಡ ಅಧಿಕಾರಿ, ಪ್ರತಿ ವಾರಕ್ಕೊಮ್ಮೆ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಬೇಕು. -ಬಸವರಾಜ ಧರ್ಮಂತಿ, ಕರವೇ ಜಿಲ್ಲಾ ಅಧ್ಯಕ್ಷ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next