Advertisement

ಅತ್ಯಾಚಾರದ ದೂರು ಆರೋಪ ಹಾಲಪ್ಪನವರದೇ ಸೃಷ್ಟಿ: ಬೇಳೂರು ವ್ಯಂಗ್ಯ

05:37 PM Jul 16, 2022 | Vishnudas Patil |

ಸಾಗರ: ಶಾಸಕರು ತಮ್ಮ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲು ಪ್ರಯತ್ನ ನಡೆದಿತ್ತು. ಅದಕ್ಕೆ ನಾನು ಕುಮ್ಮಕ್ಕು ನೀಡಿದ್ದೇನೆಂದು ಸುಳ್ಳು ಆರೋಪ ಮಾಡಿದ್ದಾರೆ. ಅಂತಹ ನೀಚ ಕೆಲಸಕ್ಕೆ ನಾನು ಇಳಿಯುವುದಿಲ್ಲ. ಅವರು ಹತಾಶರಾಗಿ ಪ್ರತಿಕ್ರಿಯಿಸುತ್ತಿದ್ದು ನನ್ನ ವಿರುದ್ಧ ಏನೇನೋ ಹೇಳುತ್ತಿದ್ದಾರೆ ಎಂದು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಪ್ರತಿಪಾದಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ತಮ್ಮ ವಿರುದ್ಧ ಇಂತಹ ಆರೋಪ ಬಂದಾಗ ಶಾಸಕ ಹಾಲಪ್ಪ ಅವರು ವೆಂಕಟೇಶ್‌ಮೂರ್ತಿ ಎಂಬುವವರ ವಿರುದ್ಧ ಇಂತಹುದೇ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಲು ಪ್ರಚೋದಿಸಿದಂತಹ ಪ್ರಕರಣ ನಡೆದಿತ್ತು. ನಾನು ಈವರೆಗೂ ಬೇರೆಯವರ ವಿರುದ್ಧ ಎಫ್‌ಐಆರ್ ಮಾಡಲು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿಲ್ಲ. ಶಾಸಕರು ಹೇಳೀಕೊಳ್ಳುವಂತೆ ಮೊನ್ನೆ ಕೂಡ ನಾನು ಹೋಗಿಲ್ಲ ಎಂದರು.

ನನ್ನ ಕಾಲದಲ್ಲಿ ಹೆಚ್ಚು ಎಫ್‌ಐಆರ್ ಆಗುತ್ತಿತ್ತು ಎಂದು ಶಾಸಕರು ಆರೋಪಿಸಿದ್ದಾರೆ. ನನ್ನ ಅವಧಿಯಲ್ಲಿ ಕಾನೂನು ಪ್ರಕಾರ ಎಫ್‌ಐಆರ್ ಆಗುವ ಪ್ರಕರಣದಲ್ಲಿ ಹಸ್ತಕ್ಷೇಪ ನಡೆಯುತ್ತಿರಲಿಲ್ಲ. ಈಗ ಶಾಸಕರು ಕೇಸು ದಾಖಲಾಗಲು ಬಿಡುತ್ತಿಲ್ಲವಾದುದರಿಂದ ಈ ತರಹದ ಕಡಿಮೆ ಸಾಧನೆ ಸಾಧ್ಯವಾಗಿದೆ ಎಂದು ಬೇಳೂರು ವ್ಯಂಗ್ಯವಾಡಿದರು.

ಎಂಡಿಎಫ್ ಸರ್ವಸದಸ್ಯರ ಸಭೆಯಲ್ಲಿ ಶ್ರೀಪಾದ ಹೆಗಡೆ ನಿಸ್ರಾಣಿ ಮತ್ತು ಜಗದೀಶ್ ಗೌಡ ಅವರ ಮೇಲೆ ಹಲ್ಲೆ ನಡೆಸಿದ 27 ಆರೋಪಿಗಳ ವಿರುದ್ಧ ನಾಲ್ಕು ತಿಂಗಳ ನಂತರ ಎಫ್‌ಐಆರ್ ದಾಖಲಾಗಿದೆ. ನಮ್ಮ ನಿರಂತರ ಹೋರಾಟಕ್ಕೆ ಸಿಕ್ಕ ಮೊದಲ ಜಯ. ನಿಂತು ಹಲ್ಲೆ ಮಾಡಿಸಿದ ಶಾಸಕ ಹಾಲಪ್ಪ ವಿರುದ್ಧ ಎಫ್‌ಐಆರ್ ದಾಖಲು ಮಾಡಿಲ್ಲ. ವಿಡಿಯೋ ಸಾಕ್ಷಿ ಇದ್ದರೂ ಸಾಗರದ ಪೊಲೀಸರಲ್ಲಿ ಭಯ ಇದೆ. ಪೊಲೀಸರು ಯಾವುದೋ ಒತ್ತಡಕ್ಕೆ ಮಣಿದು ಪ್ರಕರಣ ದಾಖಲು ಮಾಡಿಲ್ಲ. ಇಷ್ಟಾಗಿಯೂ ಎಂಡಿಎಫ್ ಹಲ್ಲೆ ಪ್ರಕರಣ ಹೊರಗಡೆ ನಡೆದಿದ್ದು, ನನಗೆ ಸಂಬಂಧ ಇಲ್ಲ ಎಂದು ಶಾಸಕರು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಪ್ರತಿಕ್ರಿಯಿಸಿದರು.

ಎಂಡಿಎಫ್ ಆಡಳಿತದ ವಿಚಾರದಲ್ಲಿ ನಾನು ಯಾರ ಪರವೂ ಇಲ್ಲ. ಹರನಾಥರಾವ್ ಅಧ್ಯಕ್ಷರಾದರೂ ಸರಿ, ಸ್ವತಃ ಶಾಸಕ ಹಾಲಪ್ಪ ಆದರೂ ಆಕ್ಷೇಪಿಸುವುದಿಲ್ಲ. ಆದರೆ ಹಲ್ಲೆ ನಡೆಸಿದವರಿಗೆ ಶಿಕ್ಷೆಯಾಗಬೇಕು, ಮುಂದೆ ಇಂತಹ ಘಟನೆ ನಡೆಯಬಾರದು ಎನ್ನುವ ಉದ್ದೇಶದಿಂದ ಪ್ರತಿಭಟನೆ ನಡೆಸಿದ್ದೇನೆ. ನಮ್ಮೂರಿನ ವಿದ್ಯಾಸಂಸ್ಥೆ ಸುಲಲಿತವಾಗಿ ನಡೆಯಬೇಕು. ಅಂತಹ ವಿದ್ಯಾಸಂಸ್ಥೆಯ ನಿರ್ವಹಣೆಯ ವಿಚಾರದಲ್ಲಿ ನಾನು ವ್ಯತಿರಿಕ್ತವಾಗಿ ನಡೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಸಾಗರ, ಹೊಸನಗರದಲ್ಲಿ ವಿಪರೀತ ಮಳೆಯಿಂದ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಬ್ಯಾಕೋಡಿನಲ್ಲಿ ತೋಟದ ಮೇಲೆ ಧರೆ ಕುಸಿದು ಹದಿನೈದು ದಿನ ಆಗಿದೆ. ಈತನಕ ಶಾಸಕರಾಗಲಿ, ಅಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ತಾಲೂಕಿನಲ್ಲಿ ಶೇ. ೪೦ಕ್ಕೂ ಹೆಚ್ಚು ಶಾಲೆಗಳು ತೀರ ದುಸ್ಥಿತಿಯಲ್ಲಿದ್ದು, ವಿದ್ಯಾರ್ಥಿಗಳು ಆತಂಕದಿಂದಲೇ ಕುಳಿತು ಪಾಠ ಕೇಳುವಂತಾಗಿದೆ. ಲ್ಯಾವಿಗೆರೆ ಶಾಲೆಯೊಳಗೆ ನೀರು ನುಗ್ಗಿದೆ. . ಕಳೆದ ವರ್ಷ ಮಳೆಯಿಂದ ಬಿದ್ದು ಹೋದ ಮನೆಗಳಿಗೆ ಈತನಕ ಪರಿಹಾರ ಕೊಟ್ಟಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನರಿಗೆ ಕಷ್ಟ ಬಿಟ್ಟರೆ ಇನ್ನೇನು ಸಿಕ್ಕಿಲ್ಲ ಎಂದು ದೂರಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶಬಾಬು ಮಾತನಾಡಿ, ಸರ್ಕಾರಿ ಆಸ್ಪತ್ರೆ, ತಾಯಿಮಗು ಆಸ್ಪತ್ರೆಯಲ್ಲಿ ಪಥ್ಯಾಹಾರದ ಗುತ್ತಿಗೆ ಪಡೆದವರ ಕುರಿತು ನಾವು ಮಾತನಾಡುತ್ತಿಲ್ಲ. ಕಾನೂನಿನ ಪ್ರಕಾರ ಆಸ್ಪತ್ರೆಯಲ್ಲಿ ಅಡುಗೆ ಮನೆ ಸುಸ್ಥಿತಿಯಲ್ಲಿರುವಾಗ, ಅಡುಗೆಯವರಿರುವಾಗ, ಡಿ ದರ್ಜೆ ನೌಕರರನ್ನು ಕೊಟ್ಟಿರುವಾಗ, ನೀರು ಸರಬರಾಜು ಸರಿಯಿರುವಾಗ ಆಹಾರವನ್ನು ಇಲ್ಲಿಯೇ ತಯಾರಿಸುವುದರ ಬದಲು ಗುತ್ತಿಗೆ ಕೊಡುವಂತೆ ಯಾವ ಕಾರಣಕ್ಕಾಗಿ ಮಾಡಲಾಗಿದೆ ಎಂಬ ಪ್ರಶ್ನೆ ವೈದ್ಯಾಧಿಕಾರಿಗಳ ಕುರಿತು ಮೂಡುತ್ತದೆ. ಈ ವಿಷಯದಲ್ಲಿ ತಾರ್ಕಿಕ ಅಂತ್ಯ ಕಂಡುಕೊಳ್ಳುವವರೆಗೆ ಹೋರಾಟ ನಡೆಸಲಿದ್ದೇವೆ ಎಂದರು.

ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಬೇಳೂರು, ಪ್ರಮುಖರಾದ ಮಹಾಬಲ ಕೌತಿ, ತಾರಾಮೂರ್ತಿ, ಸೋಮಶೇಖರ ಲ್ಯಾವಿಗೆರೆ, ಎಲ್.ಚಂದ್ರಪ್ಪ, ಆನಂದ್ ಭೀಮನೇರಿ, ರಾಘವೇಂದ್ರ, ಶ್ರೀನಾಥ್ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next