Advertisement

ಅಧಿಕಾರಿ ವರ್ತನೆಗೆ ಬೇಸತ್ತು ಸಭೆಯಲ್ಲೇ ಕಣ್ಣೇರಿಟ್ಟ ಅಧ್ಯಕ್ಷೆ 

05:12 PM Jul 29, 2018 | Team Udayavani |

ಬೀಳಗಿ: ಯಾವುದೇ ಕೆಲಸ ಮಾಡಬೇಕಾದರೂ ಮತ್ತು ಕೆಲಸದ ಬಿಲ್‌ ತೆಗೆಯಬೇಕಾದರೂ ನಾನು ಅಧ್ಯಕ್ಷೆ ಇದ್ದೇನೆ ಎನ್ನುವ ಸೌಜನ್ಯಕ್ಕಾದರೂ ಒಂದು ಮಾತು ಕೇಳದೆ ಪಪಂ ಜೆಇ ಎ.ಎಂ.ಕೊಡಕೇರಿ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಾರೆ. ಈ ಕುರಿತು ಮೇಲಧಿಕಾರಿಗಳಿಗೆ ದೂರು ಕೂಡ ನೀಡಿರುವೆ. ಅಧಿಕಾರಿಗಳ ಈ ರೀತಿಯ ವರ್ತನೆ ತಮಗೆ ತುಂಬಾ ಬೇಸರ ತರಿಸಿದೆ ಎಂದು ಪಪಂ ಅಧ್ಯಕ್ಷೆ ಕಸ್ತೂರೆವ್ವ ಮಾದರ ಶನಿವಾರ ನಡೆದ ಪಪಂ ಸಾಮಾನ್ಯ ಸಭೆಯಲ್ಲಿಯೇ ಕಣ್ಣೀರಿಟ್ಟ ಪ್ರಸಂಗ ಜರುಗಿದೆ.

Advertisement

ಅಧ್ಯಕ್ಷೆ ಪಪಂ ಜೆಇ ಅವರನ್ನು ತೀವ್ರ ತರಾಟೆ ಕೂಡ ತೆಗೆದುಕೊಂಡು 2017-18 ನೇ ಸಾಲಿನ 5 ಕೋಟಿ ವಿಶೇಷ ಅನುದಾನದಲ್ಲಿ ಗುತ್ತಿಗೆದಾರರಿಗೆ 1.60 ಕೋಟಿ ಬಿಲ್‌ ಬಟವಡೆ ಮಾಡಿದ್ದಾರೆ. ಆದರೆ, ಗುತ್ತಿಗೆದಾರರಿಗೆ ಈ ಬಿಲ್‌ ಸಂದಾಯ ಮಾಡಬೇಕಾದರೆ ಅಧ್ಯಕ್ಷರ ಗಮನಕ್ಕೆ ತಂದಿಲ್ಲ. 1.60 ಕೋಟಿ ಬಿಲ್‌ ಹಣವನ್ನು ಜೆಇ ಕೊಡಕೇರಿ ಗುತ್ತಿಗೆದಾರರಿಗೆ ನೀಡಿದ್ದಾರೆ. ಅವರು ಬಿಲ್‌ ನೀಡಿರುವುದು ತಪ್ಪು ಎಂದು ನಾನು ವಾದಿಸಲಾರೆ. ಆದರೆ, ಒಂದು ಉನ್ನತ ಹುದ್ದೆಯಲ್ಲಿರುವ ಪಪಂ ಅಧ್ಯಕ್ಷರ ಗಮನಕ್ಕೆ ತರದೆ ಇಷ್ಟೊಂದು ಮೊತ್ತದ ಹಣ ಬಟವಡೆ ಮಾಡುವುದು ಕಾನೂನು ಬಾಹಿರ ಎನ್ನುವುದು ನಮ್ಮ ನಿಲುವು. 

ಈ ಕುರಿತು ಈಗಾಗಲೇ ಸೂಕ್ತ ತನಿಖೆ ಕೈಗೊಳ್ಳುವಂತೆ ಬಾಗಲಕೋಟೆಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್‌ ಇನ್ಸಪೆಕ್ಟರ್‌ ಅವರಿಗೆ ದೂರು ಸಲ್ಲಿಸಿದ್ದೇನೆ. ಎಸ್‌ಸಿ ವರ್ಗಕ್ಕೆ ಸೇರಿದ ಮಹಿಳೆ ಎನ್ನುವ ಕಾರಣಕ್ಕೆ ಪಪಂ ಕಿರಿಯ ಅಭಿಯಂತರ ಈ ರೀತಿ ಬೇಕು ಅಂತಲೇ ನಮ್ಮ ಹುದ್ದೆಗೆ ಗೌರವ ನೀಡದೆ ಅವಮಾನಿಸುತ್ತಿದ್ದಾರೆ ಎಂದು ಕೂಡ ದೂರಿನಲ್ಲಿ ಉಲ್ಲೇಖೀಸಿರುವೆ ಎಂದು ಅಧ್ಯಕ್ಷೆ ಕಸ್ತೂರೆವ್ವ ಮಾದರ ಸಭೆಯ ಗಮನಕ್ಕೆ ತಂದರು. ಅಧ್ಯಕ್ಷೆ ಕಸ್ತೂರೆವ್ವ ಮಾದರ ಕಣ್ಣೀರು ಹಾಕುತ್ತ ಜೆಇ ಅವರ ವಿರುದ್ಧ ಹರಿಹಾಯ್ದರು. ಈ ಪ್ರಸಂಗವನ್ನು ಕಂಡ ಸಭೆಯಲ್ಲಿನ ಎಲ್ಲ ಸದಸ್ಯರೂ ಅಧ್ಯಕ್ಷೆ ಕಸ್ತೂರೆವ್ವ ಮಾದರ ಅವರಿಗೆ ಕಣ್ಣೀರು ಏಕೆ ಹಾಕುತ್ತೀರಿ ಸುಮ್ಮನಿರಿ ಎಂದು ಸಮಾಧಾನ ಪಡಿಸಿದರು. ಈ ಕುರಿತು ಪಪಂ ಜೆಇ ಎ.ಎಂ.ಕೊಡಕೇರಿ ಯಾವುದೇ ಪ್ರತಿಕ್ರಿಯೆ ನೀಡದೆ ಜಾರಿಕೊಂಡ ನಡೆ ಅಧ್ಯಕ್ಷರ ಆಕ್ರೋಶ ಹಾಗೂ ಆರೋಪಕ್ಕೆ ಪುಷ್ಟಿ ನೀಡಿತು. ಸಭೆಯಲ್ಲಿ ಯಾವುದೇ ಮಹತ್ವದ ಚರ್ಚೆ ನಡೆಯಲಿಲ್ಲ. ಪ್ರಸಕ್ತ ಸಾಲಿನ ಜಮೆ-ಖರ್ಚು ವಿವರವನ್ನು ಸಭೆಯಲ್ಲಿ ಸಾದರ ಪಡಿಸಲಾಯಿತು.

ಉಪಾಧ್ಯಕ್ಷೆ ಇಂದ್ರವ್ವ ಕೌಲಗಿ, ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ಸದಸ್ಯರಾದ ಗುರಪ್ಪ ಮೋದಿ, ಸಂಗಪ್ಪ ಕಟಗೇರಿ, ಪಡಿಯಪ್ಪ ಕರಿಗಾರ, ಅಬ್ದುಲ್‌ ರೆಹಮಾನ್‌ ಬಾಗವಾನ್‌, ಕವಿತಾ ಬಾಗೇವಾಡಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next