Advertisement

State ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಬಿಜೆಪಿಯಿಂದ ರಾಜ್ಯಪಾಲರಿಗೆ ದೂರು

09:48 PM Jan 09, 2024 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ರಾಜ್ಯಪಾಲರಿಗೆ ದೂರು ನೀಡಿರುವ ಬಿಜೆಪಿ ನಿಯೋಗ ಸರ್ಕಾರ ತಕ್ಷಣ ರೈತರಿಗೆ ಬರ ಪರಿಹಾರ ನೀಡಲಿ, ಇಲ್ಲವಾದರೆ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದೆ.

Advertisement

ವಿಪಕ್ಷ ನಾಯಕ ಆರ್‌.ಅಶೋಕ್‌, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನೊಳಗೊಂಡ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಆರ್‌.ಅಶೋಕ್‌, ಸುಮಾರು 600 ರೈತರು ಆತ್ಮಹತ್ಯೆ ಮಾಡಿಕೊಂಡರೂ ಈ ಸರ್ಕಾರ ಸಾಂತ್ವನ ಹೇಳುವ ಮಾತೃ ಹೃದಯ ತೋರುತ್ತಿಲ್ಲ. ಇಂಥ ರೈತ ವಿರೋಧಿ ಸರ್ಕಾರವನ್ನು ಇತಿಹಾಸದಲ್ಲೇ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದಲ್ಲಿ ವಲಸೆ ಆರಂಭವಾಗಿದೆ. ಬರಗಾಲ ಶುರುವಾಗಿ ಐದು ತಿಂಗಳಾದರೂ ಸರ್ಕಾರ ನಯಾ ಪೈಸೆ ಪರಿಹಾರ ನೀಡಿಲ್ಲ. 2 ಸಾವಿರ ರೂ. ಪರಿಹಾರ ನೀಡುವ ಬಗ್ಗೆ ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಇದುವರೆಗೆ ರೈತರಿಗೆ ಹಣ ತಲುಪಿಲ್ಲ. ಕಾಂಗ್ರೆಸ್‌ ಸರ್ಕಾರ ಅಧಿಕಾರದ ಲಾಲಸೆಯಿಂದಾಗಿ ರೈತರನ್ನು ಅನಾಥರನ್ನಾಗಿಸಿದೆ. ಏನೇ ಕೇಳಿದರೂ ಕೇಂದ್ರ ಸರ್ಕಾರ ನೆರವಿಗೆ ಬರುತ್ತಿಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರದ ಬೇಜವಾಬ್ದಾರಿತನದ ಬಗ್ಗೆ ವಿವರಿಸಿದ್ದೇವೆ. ಹಿಂದಿನ ನಮ್ಮ ಬಿಜೆಪಿ ಸರಕಾರ ಒಂದೆರಡು ತಿಂಗಳಲ್ಲಿ ಪರಿಹಾರ ನೀಡಿತ್ತು. ಈಗಿನ ಸರ್ಕಾರ ಕೂಡ ಅದೇ ರೀತಿ ಪರಿಹಾರ ಕೊಡಲಿ. ಇಲ್ಲವಾದರೆ ರಾಜೀನಾಮೆ ನೀಡಲಿ. ಮುಸಲ್ಮಾನರಿಗೆ 1 ಸಾವಿರ ಕೋಟಿ ರೂ.ನೀಡುವವರು ರೈತರಿಗೆ ಕೇವಲ 100 ಕೋಟಿ ರೂ. ನೀಡುತ್ತಾರೆ. ಈ ರೀತಿ ಮಾಡಿದರೆ ರೈತರ ಶಾಪ ತಟ್ಟಲಿದೆ ಎಂದು ಅಶೋಕ್‌ ಆಕ್ರೋಶ ಹೊರಹಾಕಿದರು.

ಕಥೆ ಹೇಳುತ್ತಾರೆ..
ರಾಜ್ಯ ಸರ್ಕಾರ ಕೇಂದ್ರಕ್ಕೆ 18000 ಕೋಟಿ ರೂ. ನೀಡುವಂತೆ ಮನವಿ ಮಾಡಿದೆ. ಆದರೆ, ನೀವು ಕೇವಲ 105 ಕೋಟಿ ರೂ. ಬಿಡುಗಡೆ ಮಾಡಿದ್ದೀರಿ, ಅದು ಕೇವಲ ಶೇ.1 ರಷ್ಟೂ ಆಗುವುದಿಲ್ಲ. ಬೆಳಗಾವಿ ಅಧಿವೇಶನಕ್ಕೂ ಮುಂಚೆಯೇ ಪ್ರತಿ ಹೆಕ್ಟೇರ್‌ಗೆ 2000 ರೂ.ಬೆಳೆ ಪರಿಹಾರ ನೀಡುವುದಾಗಿ ಹೇಳಿದ್ದರು. ಆದರೆ, ಅಧಿವೇಶನ ಮುಗಿದು ಒಂದು ತಿಂಗಳು ಕಳೆಯುತ್ತಿದ್ದರೂ, ಹಣ ಬಿಡುಗಡೆ ಮಾಡದೆ ಆಧಾರ್‌ ಲಿಂಕ್‌ ಮಾಡುವ ಕಥೆ ಹೇಳುತ್ತಾರೆ.
-ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next