Advertisement

ದೂರು ದಾಖಲಾತಿ ಆರಂಭ 

12:51 PM Mar 24, 2018 | |

ಬೆಳ್ತಂಗಡಿ: ಬಹುದಿನಗಳ ಬೇಡಿಕೆಯಾಗಿದ್ದ ಸಂಚಾರ ಪೊಲೀಸ್‌ ಠಾಣೆಯಲ್ಲಿ ಮಾ. 23ರಿಂದ ದೂರುಗಳನ್ನು ದಾಖಲಿಸುವ ಕಾರ್ಯ ಅಧಿಕೃತವಾಗಿ ಆರಂಭವಾಗಿದೆ.

Advertisement

ತಾಲೂಕಿನ ಸಂಚಾರ ದಟ್ಟಣೆ ಗಮನಿಸಿ ಸುಮಾರು 6 ತಿಂಗಳ ಹಿಂದೆ ಸಂಚಾರ ಠಾಣೆ ಮಂಜೂರು ಮಾಡಿಸಲಾಗಿತ್ತು. 5 ತಿಂಗಳ ಹಿಂದೆಯೇ ಅಧಿಕೃತವಾಗಿ ಆರಂಭವಾಗಿದ್ದರೂ ದೂರು ದಾಖಲು ಪ್ರಕ್ರಿಯೆ ಆರಂಭವಾಗಿರಲಿಲ್ಲ. ಇದ್ದೂ ಇಲ್ಲದಂತಿದ್ದ ಠಾಣೆಗೆ ಇದೀಗ ಜೀವ ಬಂದಂತಾಗಿದೆ. ಈವರೆಗೂ ಧರ್ಮಸ್ಥಳ ಹಾಗೂ ಬೆಳ್ತಂಗಡಿ ಆರಕ್ಷಕರ ಠಾಣೆಯಲ್ಲಿ ದೂರುಗಳು ದಾಖಲಾಗುತ್ತಿದ್ದವು. ಇನ್ನು ಎರಡೂ ಠಾಣಾ ವ್ಯಾಪ್ತಿಯ ದೂರುಗಳು ಸಂಚಾರ ಠಾಣೆಯಲ್ಲಿ ದಾಖಲಾಗಲಿವೆ.

ಠಾಣಾ ವ್ಯಾಪ್ತಿ
ಬೆಳ್ತಂಗಡಿ ವ್ಯಾಪ್ತಿಯಲ್ಲಿ ಬೆಳ್ತಂಗಡಿ ಕಸಬ, ಕುವೆಟ್ಟು, ಪಡಂಗಡಿ, ಗರ್ಡಾಡಿ, ಕಳಿಯ, ನ್ಯಾಯತರ್ಪು, ಒಡಿಲ್ನಾಳ, ಉಜಿರೆ, ಕೊಯ್ಯೂರು, ನಡ, ಬರಯ ಕನ್ಯಾಡಿ, ಮಿತ್ತ ಬಾಗಿಲು, ಕಡಿರುದ್ಯಾವರ, ಮಲವಂತಿಗೆ, ಇಂದಬೆಟ್ಟು, ನಾವೂರು, ಲಾೖಲ, ಮುಂಡೂರು, ಮೇಲಂತಬೆಟ್ಟು, ಸವಣಾಲು, ಧರ್ಮಸ್ಥಳ ವ್ಯಾಪ್ತಿಯಲ್ಲಿ ಧರ್ಮಸ್ಥಳ, ಪುದುವೆಟ್ಟು, ಬೆಳಾಲು, ಕಲ್ಮಂಜ, ಮುಂಡಾಜೆ, ಚಾರ್ಮಾಡಿ, ನೆರಿಯ, ಚಿಬಿದ್ರೆ, ತೋಟತ್ತಾಡಿ, ಬಂದಾರು, ಶಿಶಿಲ, ಕಳೆಂಜ, ನಿಡ್ಲೆ, ಪಟ್ರಮೆ, ಕೊಕ್ಕಡ, ಹತ್ಯಡ್ಕ, ರೆಖ್ಯ, ಶಿಬಾಜೆ ಸೇರಿವೆ.

ಸ್ವಂತ ಕಟ್ಟಡವಿಲ್ಲ
ಲಾೖಲದ ಸಿಕ್ವೇರ ಕಟ್ಟಡದಲ್ಲಿ ಠಾಣೆ ಕಾರ್ಯಾಚರಿಸುತ್ತಿದೆ. ಇದುವರೆಗೂ ಸ್ವಂತ ನಿವೇಶನ ಅಥವಾ ಕಟ್ಟಡ ಲಭಿಸಿಲ್ಲ. ಅಪಘಾತಗೊಂಡ ಅಥವಾ ದೂರು ದಾಖಲಾದ ವಾಹನಗಳ ನಿಲುಗಡೆಗೂ ಸೂಕ್ತ ಜಾಗದ ಕೊರತೆ ಎದುರಿಸಬೇಕಾದ ಅನಿವಾರ್ಯ ಎದುರಾಗಲಿದೆ.

ಸಿಬಂದಿ ಕೊರತೆ
ಶಿರಾಡಿ ಘಾಟಿ ರಸ್ತೆಯ ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತ ಮಾಡಲಾಗಿದ್ದು, ಮಂಗಳೂರು – ಚಾರ್ಮಾಡಿ ಹೆದ್ದಾರಿಯಲ್ಲಿ ವಾಹನ ಸಂಚಾರ ಅಧಿಕವಾಗಿದೆ. ಪ್ರಮುಖ ಪೇಟೆಗಳಾದ ಮಡಂತ್ಯಾರು, ಗುರುವಾಯನಕೆರೆ, ಸಂತೆ ಕಟ್ಟೆ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ ಮೊದಲಾದೆಡೆ ಸಿಬಂದಿ ಅಗತ್ಯ ಹೆಚ್ಚಾಗಿದೆ. ಇಬ್ಬರು ಎಸ್‌ಐ ಸಹಿತ ಒಟ್ಟು 30 ಮಂದಿ ಸಿಬಂದಿ ಆವಶ್ಯಕತೆಯಿದ್ದು, ಸದ್ಯ ಒಬ್ಬರು ಎಸ್‌ಐ ಸಹಿತ 12 ಮಂದಿ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೇಡಿಕೆಯಂತೆ ಉಳಿಕೆ ಸಿಬಂದಿ ನೇಮಕ ಶೀಘ್ರ ಆಗಬೇಕಿದೆ.

Advertisement

ಉದ್ಘಾಟನೆ ಆಗಿಲ್ಲ
ತರಾತುರಿಯಲ್ಲಿ ಠಾಣೆ ಉದ್ಘಾಟನೆಗೆ ಮಾ. 22ರಂದು ಬೆಳಗ್ಗೆ 10ಕ್ಕೆ ದಿನಾಂಕ ನಿಗದಿಪಡಿಸಿ ಅಧಿಕೃತ ಚಾಲನೆ ನೀಡುವುದಾಗಿ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿತ್ತು. ಶಾಸಕ ಕೆ. ವಸಂತ ಬಂಗೇರ ಸಂಚಾರ ಠಾಣೆ ಉದ್ಘಾಟನೆ ಮಾಡುವುದಾಗಿಯೂ ತಿಳಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಉದ್ಘಾಟನೆ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. 5 ತಿಂಗಳ ಹಿಂದೆಯೇ ಕಾರ್ಯಾಚರಣೆ ಆರಂಭಿಸಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

ಸಿಬಂದಿ ಕೊರತೆ ನೀಗಿಸಲು ಯತ್ನ
ಮುಖ್ಯವಾಗಿ ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಪರಿಸರದಲ್ಲಿ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸಲು ಸಂಚಾರ ಠಾಣೆ ಮಂಜೂರು ಮಾಡಿಸಿ ಆರಂಭಿಸಲಾಗಿದೆ. ವಾಹನ ಸವಾರರು ಮುಖ್ಯರಸ್ತೆಯಲ್ಲಿ ವಾಹನ ನಿಲ್ಲಿಸಿ ಇತರರ ವಾಹನಗಳಿಗೆ ತಡೆಯುಂಟು ಮಾಡುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಕಡಿವಾಣ ಬೀಳಬೇಕಿದೆ. ಸರಕಾರ ಹಾಗೂ ಮೇಲಧಿಕಾರಿಗಳ ಗಮನಕ್ಕೆ ತಂದು ಠಾಣೆಯ ಸಿಬಂದಿ ಕೊರತೆ ನೀಗಿಸಲು ಪ್ರಯತ್ನಿಸಲಾಗುವುದು. ಠಾಣೆಗೆ ಜಾಗದ ಹುಡುಕಾಟ ನಡೆಯುತ್ತಿದ್ದು, ಸಿಕ್ಕ ಕೂಡಲೇ ಮಂಜೂರು ಮಾಡಿಸಿ, ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು.
ಕೆ. ವಸಂತ ಬಂಗೇರ
  ಶಾಸಕರು

ವ್ಯಾಪ್ತಿಯ ಪ್ರಕರಣ
ತಾಲೂಕು ಸಂಚಾರ ಠಾಣೆ ವ್ಯಾಪ್ತಿಯ ಪ್ರಕರಣ ಬೆಳ್ತಂಗಡಿಯಲ್ಲಿಯೇ ದಾಖಲಾಗಲಿದೆ. ಸದ್ಯ ಬೇಡಿಕೆ ಮೇರೆಗೆ 1 ಜೀಪು ಲಭ್ಯವಾಗಿದೆ. ಟೋಯಿಂಗ್‌ ವಾಹನ, ವೀಲ್‌ ಲಾಕ್‌ ಮೊದಲಾದವುಗಳ ಅಗತ್ಯವಿದ್ದು, ಅದಷ್ಟು ಬೇಗ ಲಭ್ಯವಾಗುವ ಭರವಸೆ ಇದೆ.
– ಸಂದೇಶ್‌ ಪಿ.ಜಿ.
  ವೃತ್ತ ನಿರೀಕ್ಷಕರು, ಬೆಳ್ತಂಗಡಿ ಠಾಣೆ 

Advertisement

Udayavani is now on Telegram. Click here to join our channel and stay updated with the latest news.

Next