ಇಂದೋರ್: ಬೈಕ್ ನಂಬರ್ ಪ್ಲೇಟ್ ನ್ನು ಅಕ್ರಮವಾಗಿ ಬಳಸಿದ್ದಾರೆಂದು ಬಾಲಿವುಡ್ ನ ವಿಕ್ಕಿ ಕೌಶಲ್ ಮತ್ತು ಸಾರಾ ಆಲಿ ಖಾನ್ ವಿರುದ್ಧ ದೂರು ದಾಖಲಾಗಿದೆ. ಮಧ್ಯ ಪ್ರದೇಶದ ವ್ಯಕ್ತಿಯೊಬ್ಬರು ಈ ದೂರು ನೀಡಿದ್ದಾರೆ.
ಮುಂಬರುವ ಚಲನಚಿತ್ರದ ದೃಶ್ಯಕ್ಕಾಗಿ, ವಿಕ್ಕಿ ಕೌಶಲ್ ಅವರು ಸಾರಾ ಅವರನ್ನು ತನ್ನ ಹಿಂದೆ ಕುಳ್ಳಿರಿಸಿಕೊಂಡು ಮೋಟಾರ್ ಸೈಕಲ್ ಓಡಿಸಿದ್ದಾರೆ. ಇಂದೋರ್ ನಿವಾಸಿಯು ವಿಕ್ಕಿ ಮತ್ತು ಸಾರಾ ಬಳಸಿದ ಬೈಕ್ ನ ನಂಬರ್ ಪ್ಲೇಟ್ ತನಗೆ ಸೇರಿದ ವಾಹನದ್ದು ಎಂದು ಹೇಳಿಕೊಂಡಿದ್ದಾನೆ.
“ಚಲನಚಿತ್ರದ ಸೀಕ್ವೆನ್ಸ್‌ನಲ್ಲಿ ಬಳಸಲಾದ ವಾಹನದ ಸಂಖ್ಯೆ ನನ್ನದಾಗಿದೆ. ಇದು ಚಲನಚಿತ್ರ ಘಟಕಕ್ಕೆ ತಿಳಿದಿದೆಯೇ ಎಂದು ನನಗೆ ತಿಳಿದಿಲ್ಲ, ಆದರೆ ಇದು ಕಾನೂನುಬಾಹಿರವಾಗಿದೆ” ಎಂದು ದೂರುದಾರ ಜೈ ಸಿಂಗ್ ಯಾದವ್ ಶನಿವಾರ ಎಎನ್ಐ ಗೆ ತಿಳಿಸಿದರು.
“ಅವರು ಅನುಮತಿಯಿಲ್ಲದೆ ನನ್ನ ನಂಬರ್ ಪ್ಲೇಟ್ ಬಳಸುವಂತಿಲ್ಲ. ನಾನು ಠಾಣೆಯಲ್ಲಿ ಮೆಮೊರಾಂಡಮ್ ನೀಡಿದ್ದೇನೆ. ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
Related Articles
ಇದನ್ನೂ ಓದಿ:ಡ್ರಗ್ ಸ್ಮಗ್ಲರ್ ನನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಗುಂಪಿನಿಂದ ದಾಳಿ: ನಾಲ್ವರಿಗೆ ಗಾಯ
ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಇಂದೋರ್‌ನ ಬಂಗಂಗಾ ಪ್ರದೇಶದ ಸಬ್ ಇನ್‌ಸ್ಪೆಕ್ಟರ್ ರಾಜೇಂದ್ರ ಸೋನಿ, “ನಮಗೆ ದೂರು ಬಂದಿದೆ, ನಂಬರ್ ಪ್ಲೇಟ್ ಅನ್ನು ಅಕ್ರಮವಾಗಿ ಬಳಸಲಾಗಿದೆಯೇ ಎಂದು ನಾವು ನೋಡುತ್ತೇವೆ. ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಚಿತ್ರ ಘಟಕ ಇಂದೋರ್ ನಲ್ಲಿದ್ದರೆ, ನಾವು ಅವರನ್ನು ತನಿಖೆ ಮಾಡಲು ಪ್ರಯತ್ನಿಸುತ್ತೇವೆ” ಎಂದಿದ್ದಾರೆ.
ವಿಕ್ಕಿ ಮತ್ತು ಸಾರಾ ಇತ್ತೀಚೆಗೆ ತಮ್ಮ ಮುಂಬರುವ ಹೆಸರಿಡದ ಚಿತ್ರದ ಶೂಟಿಂಗ್‌ನಲ್ಲಿ ಇಂದೋರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.