ಉಪ್ಪಿನಂಗಡಿ: ದೇಶದ ಪ್ರಧಾನಿಯನ್ನು ಅಸಾಂವಿಧಾನಿಕ ಪದ ಬಳಸಿ ಸಾರ್ವಜನಿಕ ವೇದಿಕೆಯಲ್ಲಿ ನಿಂದಿಸಿದ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿ ಬಿಜೆಪಿ ಉಪ್ಪಿನಂಗಡಿ ಶಕ್ತಿ ಕೇಂದ್ರದ ವತಿಯಿಂದ ರವಿವಾರ ಉಪ್ಪಿನಂಗಡಿಯಲ್ಲಿ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಲಾಯಿತು.
ದೇಶದ ಪ್ರಧಾನಿಯ ಬಗ್ಗೆ ಅಸಭ್ಯತೆಯ ಮಟ್ಟಕ್ಕಿಳಿದು ಕೆಟ್ಟ ಪದ ಬಳಕೆ ಮಾಡಿರುವ ಅಪಾದಿತ ಸಚಿವರ ವಿರುದ್ದ ಕಾನೂನು ಕ್ರಮ ಜರಗಿಸಬೇಕೆಂದು ತನ್ಮೂಲಕ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಸಚಿವರನ್ನು ಬಂಧಿಸಬೇಕೆಂದು ಅಗ್ರಹಿಸಿದ್ದಾರೆ.
ದೂರು ನೀಡುವ ವೇಳೆ ತಾ.ಪಂ. ಸದಸ್ಯರಾದ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಸುಜಾತಾ ಕೃಷ್ಣ ಆಚಾರ್ಯ, ಮುಕುಂದ ಗೌಡ, ಬಿಜೆಪಿ ಮುಖಂಡರಾದ ಸುನೀಲ್ ದಡ್ಡು, ಜಯಾನಂದ, ಕೆ. ರಾಮಚಂದ್ರ ಪೂಜಾರಿ, ಗಣೇಶ್ ಬಜತ್ತೂರು, ರಾಮಚಂದ್ರ ಮಣಿಯಾಣಿ, ಸುರೇಶ್ ಅತ್ರಮಜಲು, ಮೋನಪ್ಪ ಬೆದ್ರೋಡಿ, ಧನಂಜಯ ಬೆದ್ರೋಡಿ, ಪೂವಪ್ಪ ದೇಂತಡ್ಕ, ಜಯಂತ ಪುರೋಳಿ ಮೊದಲಾದವರು ಉಪಸ್ಥಿತರಿದ್ದರು.
ದೂರು ಸ್ವೀಕರಿಸಿದ ಸಬ್ ಇನ್‌ಸ್ಪೆಕ್ಟರ್ ನಂದ ಕುಮಾರ್, ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬಂಟ್ವಾಳದಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಬಗ್ಗೆ ದಾಖಲಿಸಿ ಸರಕಾರಕ್ಕೆ ಮಾಹಿತಿ ನೀಡಲಾಗುವುದೆಂದು ತಿಳಿಸಿದರು.
ಇದೇ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪುತ್ತೂರು ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸುನಿಲ್ ದಡ್ಡು, ರಾಜಕೀಯದ ಆರೋಗ್ಯ ಪೂರ್ಣ ಟೀಕೆ ಸರ್ವ ಸಾಮಾನ್ಯ. ಆದರೆ ಓರ್ವ ಗಣ್ಯ ವ್ಯಕ್ತಿಯಾಗಿ, ಈ ಬೃಹತ್ ದೇಶದ ಪ್ರಧಾನಿಯಾಗಿ, ಇಡೀ ವಿಶ್ವದ ಮಾನ್ಯತೆಗೆ ಒಳಗಾಗಿರುವ ನರೇಂದ್ರ ಮೋದಿಯವರನ್ನು ಅಸಾಂವಿಧಾನಿಕ ಪದ ಬಳಸಿ ನಿಂದಿಸಿರುವುದು ದೇಶಕ್ಕೆ ಮಾಡಿರುವ ನಿಂದನೆಯಾಗಿದೆ. ಇದು ಇಡೀ ದೇಶವಾಸಿಗರನ್ನು ಕೆರಳಿಸಿದೆ. ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಸಕಾರಾತ್ಮಕ ಕ್ರಮವನ್ನು ಬಯಸಿದ್ದೇವೆ ಎಂದು ತಿಳಿಸಿದರು.