Advertisement

ಪತಿ ವಿರುದ್ದ ಪಾಲಿಕೆ ಸದಸ್ಯೆ ದೂರು

01:10 PM Jun 28, 2022 | Team Udayavani |

ಹುಬ್ಬಳ್ಳಿ: ಮಹಾನಗರ ಪಾಲಿಕೆ ಸದಸ್ಯೆಯ ಜತೆ ಅವರ ಪತಿ ಜಗಳ ಮಾಡಿದ್ದಲ್ಲದೆ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಸದಸ್ಯೆ ಕೇಶ್ವಾಪುರ ಠಾಣೆಯಲ್ಲಿ ಪತಿ ವಿರುದ್ಧ ದೂರು ಸಲ್ಲಿಸಿದ್ದಾರೆ.

Advertisement

ಪಾಲಿಕೆಯ 58ನೇ ವಾರ್ಡ್‌ನ ಸದಸ್ಯೆ ಶ್ರುತಿ ಚಲವಾದಿ ಪತಿಯಿಂದ ಹಲ್ಲೆಗೊಳಗಾದವರು.

ಇವರ ಪತಿ ಸಂತೋಷ ಚಲವಾದಿ ಅನ್ಯ ಮಹಿಳೆಯೊಂದಿಗೆ ಮಾತನಾಡುವುದು, ಚಾಟ್‌ ಮಾಡುತ್ತಿರುವ ವಿಷಯವಾಗಿ ದಂಪತಿ ಮಧ್ಯೆ ಆಗಾಗ ವಾಗ್ವಾದ ನಡೆಯುತ್ತಿತ್ತು. ರವಿವಾರ ಬೆಳಗ್ಗೆ ಸಹ ಇದೇ ವಿಷಯವಾಗಿ ಜಗಳವುಂಟಾದಾಗ ರೂಮ್‌ನಿಂದ ಹೊರಗೆ ಹೋಗದಂತೆ ತಡೆಗಟ್ಟಿ ಮನಬಂದಂತೆ ಹಲ್ಲೆ ಮಾಡಿ, ಗರ್ಭಿಣಿ ಎಂಬುದನ್ನು ಲೆಕ್ಕಿಸದೆ ಕಾಲಿನಿಂದ ಒದ್ದಿದ್ದಾಗಿ ಆರೋಪಿಸಲಾಗಿದೆ.

ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಯಾವ ಪೊಲೀಸ್‌ ಠಾಣೆಗೆ, ಅಧಿಕಾರಿ ಬಳಿ ಹೋಗು. ನನಗೆ ಜೈಲು, ಸ್ಟೇಶನ್‌ ಹೊಸದಲ್ಲ. ಹೊರಗಿನ ಹುಡುಗರನ್ನು ಕರೆಯಿಸಿ ನಿನ್ನನ್ನು ಮತ್ತು ನಿಮ್ಮ ಅಣ್ಣನನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಕುತ್ತಿಗೆ ಹಿಚುಕಿ ಕೊಲೆಗೆ ಯತ್ನಿಸಿದ್ದಾಗಿ ಶ್ರುತಿ ಅವರು ಪೊಲೀಸ್‌ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ದೂರಿನನ್ವಯ ಕೇಶ್ವಾಪುರ ಠಾಣೆ ಪೊಲೀಸರು ಸಂತೋಷನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಸಂತೋಷ ಚಲವಾದಿ ಕೇಶ್ವಾಪುರದ ವಿನಯ ಪಿಳ್ಳೆ ಮತ್ತು ಕುಮಾರ ಪಿಳ್ಳೆ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ. ಇತ್ತೀಚೆಗಷ್ಟೆ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗೆ ಬಂದಿದ್ದ.

Advertisement

ಅಪಹರಣದ ಮಾಸ್ಟರ್‌ಮೈಂಡ್‌ ಪಾಲಿಕೆ ಸದಸ್ಯ: ಸಹನಾ

ನನ್ನನ್ನು ನನ್ನ ತಂದೆ-ತಾಯಿ ಮುಖಾಂತರ ಅಪಹರಿಸಿಕೊಂಡು ಮೂರು ಪ್ರತ್ಯೇಕ ವಾಹನಗಳ ಮೂಲಕ ಗೋವಾಕ್ಕೆ ಕರೆದೊಯ್ದಿದ್ದರು. ಇದರೆಲ್ಲದರ ಮಾಸ್ಟರ್‌ಮೈಂಡ್‌ ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ಆಗಿದ್ದು, ಆತ ನನ್ನ ತಂದೆಯನ್ನು ಈ ಪ್ರಕರಣದಲ್ಲಿ ಸಿಕ್ಕಿ ಹಾಕಿಸಿ ತಾನು ರಾಜಕೀಯದಲ್ಲಿ ಬೆಳೆಯಲು ಮಾಡಿದ ಪ್ಲಾನ್‌ ಆಗಿದೆ ಎಂದು ಸಹನಾ ದಾಂಡೇಲಿ ಆರೋಪಿಸಿದ್ದು, ಪೊಲೀಸರು ಚೇತನನ್ನು ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅಪಹರಣದಲ್ಲಿ ತಂದೆಯ ಯಾವ ಪಾತ್ರವಿಲ್ಲ. ಚೇತನ ಅವರನ್ನು ಬಳಸಿಕೊಂಡು ತನ್ನ ಸಹಚರರೊಂದಿಗೆ ಈ ಕೃತ್ಯ ಮಾಡಿದ್ದಾನೆ. ಪೊಲೀಸರು ಸಹಿತ ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕೇ ವಿನಃ ಅನ್ಯಾಯಕ್ಕೊಳಗಾದವರ ಮೇಲೆ ದಬ್ಟಾಳಿಕೆ ಮಾಡಬಾರದು. ಆತನಿಗೆ ಶಿಕ್ಷೆ ಆಗಬೇಕು. ನಮಗೆ ನ್ಯಾಯ ಒದಗಿಸಬೇಕು ಎಂದು ಸಹನಾ ಆಗ್ರಹಿಸಿದ್ದಾರೆ.

ತನ್ನ ಪತ್ನಿಯನ್ನು ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ಚಿತಾವಣೆಯಿಂದ ಅಪಹರಿಸಲಾಗಿದೆ ಎಂದು ಗೋಕುಲ ರೋಡ್‌ ಠಾಣೆಯಲ್ಲಿ ನಿಖೀಲ ದಾಂಡೇಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ಸಹನಾರನ್ನು ಗೋವಾದಲ್ಲಿ ರಕ್ಷಿಸಿ, ನಗರಕ್ಕೆ ಕರೆ ತಂದು ಪತಿಯ ಮನೆಗೆ ಕಳುಹಿಸಿದ್ದರು. ಸೋಮವಾರ ಗೋಕುಲ ರೋಡ್‌ ಪೊಲೀಸರು ಸಹನಾರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರು ನ್ಯಾಯಾಧೀಶರ ಎದುರು ತಮ್ಮ ಹೇಳಿಕೆ ಕೊಟ್ಟಿದ್ದಾರೆ. ಪೊಲೀಸರು ಅವರ ಹೇಳಿಕೆ ಆಧರಿಸಿ ಮುಂದಿನ ತನಿಖೆ ಕೈಗೊಳ್ಳಲು ಮುಂದಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next