ಪುತ್ತೂರು: ಕ್ಲಬ್ ಹೌಸ್‌ನ ಚರ್ಚೆಯಲ್ಲಿ ಹಿಂದೂ ಧರ್ಮದ ದೇವರು ಶ್ರೀರಾಮಚಂದ್ರ, ಸೀತಾ ಮಾತೆ ಮತ್ತು ಹನುಮಂತ ದೇವರನ್ನು ಕೆಟ್ಟ ಪದಗಳನ್ನು ಬಳಸಿ ಅವಹೇಳನ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಲ್ಲದೆ ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡಿ ಕೋಮು ಭಾವನೆಗಳನ್ನು ಕೆರಳಿಸಿದ ಆರೋಪದಡಿ ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ, ನ್ಯಾಯವಾದಿ ಶೈಲಜಾ ಅಮರನಾಥ್ ಸೇರಿದಂತೆ ನಾಲ್ವರ ವಿರುದ್ಧ ಪುತ್ತೂರು ಬಿಜೆಪಿ ಗ್ರಾಮಾಂತರ ಮತ್ತು ನಗರ ಮಂಡಲದ ಮಹಿಳಾ ಮೋರ್ಚಾದಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ದೇವರ ಬಗ್ಗೆ ಅವಹೇಳನಕಾರಿ ಅಸಹ್ಯ ಶಬ್ದಗಳಿಂದ ಅವಮಾನಿಸಿ ಮಾತುಗಳನ್ನು ಆಡಿದ್ದು, ಇದರಿಂದ ಹಿಂದುಗಳಾದ ನಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟಾಗಿರುತ್ತದೆ. ಅದಲ್ಲದೆ ಅಶ್ಲೀಲವಾಗಿ ದೇವರ ಕುರಿತು ಮಾತನಾಡಿರುವುದು ಜಾತಿ ಧರ್ಮಗಳೊಳಗೆ ಕೋಮು ಪ್ರಚೋದನೆ ನೀಡುವ, ಅಶಾಂತಿ ಮತ್ತು ಸಾಮಾಜಿಕ ಶಾಂತಿ ಭಂಗ ತರುವ ಉದ್ದೇಶದಿಂದಾಗಿರುತ್ತದೆ. ಈ ನಿಟ್ಟಿನಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ಶೈಲಜಾ ಅಮರನಾಥ್, ಪ್ರೀತು ಶೆಟ್ಟಿ ಯಾನೆ ಮಹಾಲಕ್ಷ್ಮೀ, ಅನಿಲ್, ಪ್ರವೀಣ್, ಪುನೀತ್ ಅವರನ್ನು ದಸ್ತಗಿರಿ ಮಾಡಿ ಅವರ ವಿರುದ್ಧ ಕಠಿನ ಕಾನೂನಾತ್ಮಕ ಶಿಕ್ಷೆ ವಿಧಿಸುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.
ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ಯಶಸ್ವಿನೀ ಶಾಸ್ತ್ರಿ, ನಗರ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಮತ್ತು ಜಯಶ್ರೀ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ತ್ರಿವೇಣಿ ಪೆರ್ವೊಡಿ, ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಪ್ರಭಾ ಆಚಾರ್ಯ, ಗ್ರಾಮಾಂತರ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶೋಧಾ ಗೌಡ, ಗ್ರಾಮಾಂತರ ಮಂಡಲ ಉಪಾಧ್ಯಕ್ಷೆ ಮೀನಾಕ್ಷಿ ಮಂಜುನಾಥ್ ಹಾಗೂ ಉಷಾ ಮುಳಿಯ, ನಗರ ಮಂಡಲದ ಪ್ರ.ಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ, ನಗರ ಮಂಡಲದ ಉಪಾಧ್ಯಕ್ಷೆ ವಿದ್ಯಾಗೌರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.