Advertisement

ಭ್ರಷ್ಟಾಚಾರ ಕಂಡರೆ ಎಸಿಬಿಗೆ ದೂರು ನೀಡಿ

08:47 AM Nov 17, 2018 | Team Udayavani |

ಮಂಗಳೂರು: ಕಂದಾಯಕ್ಕೆ ಸಂಬಂಧ ಪಟ್ಟ ಕೆಲಸಗಳಲ್ಲಿ ಭ್ರಷ್ಟಾಚಾರ ಕಂಡುಬಂದರೆ ಹಿಂಜರಿಕೆಯಿಲ್ಲದೆ ಎಸಿಬಿಗೆ ದೂರು ನೀಡಬೇಕು. ಎಸಿಬಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಸೂಚಿಸಿದ್ದಾರೆ. ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಕಂದಾಯ ಅದಾಲತ್‌ನಲ್ಲಿ ಕಂದಾಯ ಕೆಲಸಗಳನ್ನು ಮಾಡಿಕೊಡಬೇಕಾದರೆ ಹಣ ಕೇಳುತ್ತಾರೆ; ನನಗೂ ಈ ಅನುಭವ ಆಗಿದೆ ಎಂಬ ಹಿರಿಯರೊಬ್ಬರ ದೂರಿಗೆ ಅವರು ಪ್ರತಿಕ್ರಿಯಿಸಿದರು. ಭೂನ್ಯಾಯ ಮಂಡಳಿಯಲ್ಲಿ ಇತ್ಯರ್ಥಗೊಂಡ ಪ್ರಕರಣಗಳಲ್ಲಿ ಆಸ್ತಿ ವಿವರ ಆರ್‌ಟಿಸಿಯಲ್ಲಿ ನೋಂದಣಿ ಆಗುತ್ತಿಲ್ಲ ಎಂಬ ಅಹವಾಲು ಕೇಳಿಬಂತು. ಕೋರ್ಟ್‌ ಕೇಸ್‌ಗಳಲ್ಲಿ ಶಿಫಾರಸುಗೊಂಡ ಪ್ರಕರಣಗಳಲ್ಲಿ ಆಸ್ತಿ ವಿವರ ತಾನಾಗಿ ಆರ್‌ಟಿಸಿಯಲ್ಲಿ ನೋಂದಣಿ ಆಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

ಪ್ರಾಪರ್ಟಿ ಕಾರ್ಡ್‌
ಮಂಗಳೂರು ನಗರದಲ್ಲಿ ಆಸ್ತಿ ಸರ್ವೇ ಬದಲು ಪ್ರಾಪರ್ಟಿ ಕಾರ್ಡ್‌ ನೀಡುತ್ತಿರುವುದರಿಂದ ಮನಪಾ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಖಾತಾವನ್ನು ಸುಲಭವಾಗಿ ಪಡೆಯಬಹುದಾಗಿದೆ. ಆಸ್ತಿ ವರ್ಗಾವಣೆ ಮತ್ತು ಮಾರಾಟಕ್ಕೆ ಇನ್ನು ಮುಂದೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ. ಸುಮಾರು 7 ಪುಟ ಗಳಲ್ಲಿ ಆಸ್ತಿಗೆ ಸಂಬಂಧಿಸಿದ ಸಮಗ್ರ ದಾಖಲೆ ಒಂದೇ ಕಡೆ ಸಿಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

55 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ
ಜಿಲ್ಲಾ ಮಟ್ಟದ ಕಂದಾಯ ಅದಾಲತ್‌ನಲ್ಲಿ ಒಟ್ಟು 185 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 55 ಮಂದಿ ಅರ್ಜಿದಾರರಿಗೆ ಸ್ಥಳದಲ್ಲಿಯೇ ಪರಿಹಾರವನ್ನು ನೀಡಲಾಗಿದೆ. ಉಳಿದ ಅರ್ಜಿಗಳಿಗೆ ಸಮಯ ಮಿತಿಯೊಳಗೆ ಪರಿಹಾರ ಹಾಗೂ ಉತ್ತರ ನೀಡಲಾಗುವುದು ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು. ಅಪರ ಜಿಲ್ಲಾಧಿಕಾರಿ ಕುಮಾರ್‌, ಪುತ್ತೂರು ಸಹಾಯಕ ಆಯುಕ್ತ ಕೃಷ್ಣಮೂರ್ತಿ, ಮಂಗಳೂರು ತಹಶೀಲ್ದಾರ್‌ ಗುರುಪ್ರಸಾದ್‌, ಪ್ರೊಬೆಷನರಿ ತಹಶೀಲ್ದಾರ್‌ ಮದನ್‌ ಉಪಸ್ಥಿತರಿದ್ದರು.

ತಡವಾಗಿ ಆಹ್ವಾನ: ಗೈರು 
ಶಾಸಕ ಡಿ. ವೇದವ್ಯಾಸ ಕಾಮತ್‌ ಅವರಿಗೆ ಅಧಿಕೃತವಾಗಿ ಅದಾಲತ್‌ ಬಗ್ಗೆ ಮಾಹಿತಿ ನೀಡದ್ದರಿಂದ ಗೈರಾಗಿದ್ದರು. ನ. 12ರಂದು ನಿಗದಿಯಾಗಿದ್ದ ಅದಾಲತ್‌ಗೆ ಆಹ್ವಾನ ನೀಡಿದ್ದ ಅಧಿಕಾರಿಗಳು, ಅದು ಮುಂದೂಡಿಕೆಯಾಗಿರುವ ಬಗೆಗೂ ತಿಳಿಸಿದ್ದರು. ಆದರೆ ಮರುನಿಗದಿತ ಅದಾಲತ್‌ಗೆ ಅಧಿಕೃತ ಆಹ್ವಾನ ನೀಡಿರಲಿಲ್ಲ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ನಡೆಯುವ ಅದಾಲತ್‌ಗೆ ಬೆಳಗ್ಗೆ 9.45ರ ವೇಳೆಗೆ ತಿಳಿಸಿದ್ದರು ಎಂದು ಶಾಸಕರು ಆಪಾದಿಸಿದ್ದಾರೆ.

ಉದ್ಘಾಟನೆಗೆ ಸಚಿವರಿಲ್ಲ
ಬೆಳಗ್ಗೆ 10 ಗಂಟೆಗೆ ಕಂದಾಯ ಅದಾಲತ್‌ ಆರಂಭವಾಗಿದ್ದರೂ ಮಧ್ಯಾಹ್ನದ ವರೆಗೆ ಜನಪ್ರತಿನಿಧಿಗಳಾರೂ ಆಗಮಿಸಿರಲಿಲ್ಲ. ಅದಾಲತ್‌ ಉದ್ಘಾಟಿಸಬೇಕಿದ್ದ ಸಚಿವ ಖಾದರ್‌ ಬಾರದ ಕಾರಣ ಕೆಲವು ಅರ್ಜಿದಾರರು ಅಸಮಾಧಾನಗೊಂಡರು. ವೇದಿಕೆಗೆ ತೆರಳಿದ ಜೆರಾಲ್ಡ್‌ ಈ ಬಗ್ಗೆ ಪ್ರಶ್ನಿಸಿದರಲ್ಲದೆ ಜನಪ್ರತಿನಿಧಿಗಳು ಭಾಗವಹಿಸಿದ್ದರೆ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾವಿಸಲು ಸಾಧ್ಯವಾಗುತ್ತಿತ್ತು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸಚಿವರು ಬರುತ್ತಾರೆ. ಅದಾಲತನ್ನು ಅಧಿಕಾರಿಗಳು ನಿರ್ವಹಿಸುತ್ತಾರೆ ಎಂದು ಸ್ಪಷ್ಟಪಡಿಸಿದರು. ಆದರೂ ಜೆರಾಲ್ಡ್‌ ತಂಡ ಪಟ್ಟು ಬಿಡದಾಗ ಹೊರ ನಡೆಯುವಂತೆ ಜಿಲ್ಲಾಧಿಕಾರಿ ಆದೇಶಿಸಿದರು. ಅಷ್ಟರಲ್ಲಿ ಸಭೆಯಲ್ಲಿದ್ದ ನಾಗರಿಕರೂ ಅದಾಲತ್‌ಗೆ ಅಡ್ಡಿಪಡಿಸದಂತೆ ಆಗ್ರಹಿಸಿದ್ದರಿಂದ ತಂಡ ವೇದಿಕೆಯಿಂದ ಕೆಳಗಿಳಿಯಿತು. ಮಧ್ಯಾಹ್ನದ ಬಳಿಕ ಉಸ್ತುವಾರಿ ಸಚಿವರು ಆಗಮಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next