ಬೆಂಗಳೂರು: ವಾಹನ ಸವಾರರೇ ಎಚ್ಚರ. ಲಾಕ್‌ಡೌನ್ ಸಡಿಲಿಕೆಯಾಗಿದೆ ಎಂದು ಎಲ್ಲೆಂದರಲ್ಲಿ ಬೇಕಾಬಿಟ್ಟಿ ವೇಗವಾಗಿ ಓಡಾಡಿದರೆ, ನಿಯಮ ಉಲ್ಲಂಘಿಸಿದರೆ ದಂಡ ತೆರಬೇಕಾಗುತ್ತದೆ ಹುಷಾರ್!
ಲಾಕ್‌ಡೌನ್ ಸ್ವಲ್ಪ ಮಟ್ಟಿಗೆ ಸಡಿಲಿಕೆ ಮಾಡಲಾಗಿದೆ. ಹೀಗಾಗಿ ವಾಹನ ಸವಾರರು ನಿತ್ಯ ವಾಹನಗಳಲ್ಲಿ ಎಗ್ಗಿಲ್ಲದೆ ಓಡಾಟ ನಡೆಸುತ್ತಿದ್ದಾರೆ. ಆದರೆ, ಕೋವಿಡ್ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಪೊಲೀಸರು ಸದ್ಯ ರಸ್ತೆಯಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಅದನ್ನೆ ದುರು ಪಯೋಗ ಪಡಿಸಿಕೊಂಡ ಕೆಲವರು ನಿಯಮ ಉಲ್ಲಂಘನೆ ಮಾಡಿ ಓಡಾಡುತ್ತಿದ್ದಾರೆ.
ಹೀಗಾಗಿ ಇದೀಗ ಸಂಚಾರ ಪೊಲೀಸರು ದಂಡ ವಿಧಿಸಲು “ಸ್ಮಾರ್ಟ್‌ರೂಟ್’ ಕಂಡು ಕೊಂಡಿದ್ದು, ‘ಪಬ್ಲಿಕ್ ಐ’ ಆ್ಯಪ್ ಹೊರ ಮತ್ತು ಒಳವರ್ತುಲ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಇಂಟರ್ ಸೆಪ್ಟರ್ ಮೂಲಕ ದಂಡ ವಿಧಿಸುತ್ತಿದ್ದಾರೆ. ಹೆಲ್ಮೆಟ್ ಹಾಕದಿರುವುದು, ಸೀಟ್ ಬೆಲ್ಟ್ ಹಾಕದಿರುವುದು, ಕುಡಿದು ವಾಹನ ಚಲಾವಣೆ ಸೇರಿ ಎಲ್ಲ ರೀತಿಯ ನಿಯಮ ಉಲ್ಲಂಘನೆ ಪ್ರಕರಣಗಳು ಇದೀಗ ಸಾರ್ವಜನಿಕರೇ ಪಬ್ಲಿಕ್ ಐ ಮೂಲಕ ದೂರು ನೀಡುತ್ತಿದ್ದಾರೆ. ಆ ದೂರಿನ ಪೂರ್ವಪರ ಪರಿಶೀಲನೆ ನಡೆಸಿ ದಂಡ ವಿಧಿಸಲಾಗುತ್ತಿದೆ.
ಇದರೊಂದಿಗೆ ಜಪ್ತಿ ಮಾಡಿರುವ ವಾಹನಗಳ ಮೂಲಕ ಹಳೇಯ ದಂಡ ವಸೂಲಿ ಮಾಡಲಾಗುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ವೇಗ ಹೆಚ್ಚಿದರೆ ದಂಡ ಪ್ರಯೋಗ : ಹೊರ ಮತ್ತು ಒಳ ವರ್ತುಲ ರಸ್ತೆ ಸೇರಿ ಕೆಲ ಮುಖ್ಯ ರಸ್ತೆಗಳಲ್ಲಿ ಸಂಚಾರ ಪೊಲೀಸ್ ವಿಭಾಗದ ಇಂಟರ್ ಸೆಪ್ಟರ್ ವಾಹನದ ಮೂಲದ ಅತೀ ವೇಗವಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ದಂಡ ವಿಧಿಸಲಾಗುತ್ತಿದೆ. ಜತೆಗೆ ಹೆಲ್ಮೆಟ್ ಧರಿಸದೆ ನಿಯಮ ಉಲ್ಲಂಘನೆ ಮಾಡುವ ವಾಹನಗಳ ನಂಬರ್ ಬರೆದಿಟ್ಟುಕೊಂಡು ದಂಡ ವಿಧಿಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದರು.