ಭಟ್ಕಳ: ನಗರದ ನ್ಯೂ ಇಂಗ್ಲೀಷ್ ಶಾಲೆಯ ಕಮಲಾವತಿ ರಾಮನಾಥ ಶಾನಭಾಗ ಸಭಾಂಗಣದಲ್ಲಿ ಸ್ಪಂದನಾ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ತರಬೇತಿಯನ್ನು ಸಹಾಯಕ ಆಯುಕ್ತೆ ಮಮತಾ ದೇವಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿಖರವಾದ ಗುರಿ ಹೊಂದುವುದರ ಮೂಲಕ ಕಠಿಣ ಪರಿಶ್ರಮದಿಂದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉತ್ತಿರ್ಣರಾಗಬಹುದು. ಐಎಎಸ್, ಐಪಿಎಸ್ ಪರೀಕ್ಷೆಯ ತರಬೇತಿ ಪಡೆಯಲು ದೊಡ್ಡ ನಗರಗಳಿಗೆ ಹೋಗಬೇಕೆಂದೇನೂ ಇಲ್ಲ. ಸ್ಥಳೀಯವಾಗಿಯೇ ಅಂತಹ ತರಬೇತಿ ಪಡೆದು ಉತ್ತೀರ್ಣರಾಗಬಹುದು, ಅಂತರ್ಜಾಲದ ಮೂಲಕ ನಮ್ಮ ಕೈಯಲ್ಲೆ ಎಲ್ಲ ಮಾಹಿತಿಗಳೂ ದೊರಕುತ್ತಿದ್ದು ಅದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರದಲ್ಲಿರುವ ವಿದ್ಯಾರ್ಥಿಗಳೇ ತರಬೇತಿ ಪಡೆಯುತ್ತಿದ್ದು ಈಗ ಅದನ್ನು ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ತಿಳಿಸಿ ತರಬೇತಿ ನೀಡುತ್ತಿರುವ ಭಟ್ಕಳ ಸ್ಪಂದನ ಸಂಸ್ಥೆ ಕಾರ್ಯ ಶ್ಲಾಘಿಸಿದ ಅವರು, ಮುಂದಿನ ದಿನಗಳಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕುರಿತು ತರಬೇತಿ ನೀಡಲು ನಾನೂ ಕೂಡಾ ಸಿದ್ಧಳಿದ್ದೇನೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಬೇಕು ಎನ್ನುವ ಭಾವನೆ ಬಿಟ್ಟು ಸತತ ಪ್ರಯತ್ನ ಮಾಡಿ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಎಂದು ಕಿವಿ ಮಾತು ಹೇಳಿದರು.
Related Articles
ಅಧ್ಯಕ್ಷತೆ ವಹಿಸಿದ್ದ ಸ್ಪಂದನ ಸಂಸ್ಥೆ ಅಧ್ಯಕ್ಷ ರಾಘವೇಂದ್ರ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಬೆಂಗಳೂರಿನ ಇಂಡಿಯಾ ಫಾರ್ ಐಎಎಸ್ ಸಂಸ್ಥೆಯ ಸೈಯದ್ ಸದತ್ ಮತ್ತು ಅಮನ್ ಜೈನ್ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ನೀಡಿದರು.
ಸ್ಪಂದನೆ ಸಂಸ್ಥೆ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ ವಂದಿಸಿದರು. ಶಿಕ್ಷಕ ಪರಮೇಶ್ವರ ನಾಯ್ಕ ನಿರೂಪಿಸಿದರು. ಸ್ಪಂದನ ಸಂಸ್ಥೆಯ ಪಾಂಡುರಂಗ ನಾಯ್ಕ, ಭಾಸ್ಕರ ನಾಯ್ಕ, ಶಿವಾನಂದ ನಾಯ್ಕ, ರಾಜೇಶ ನಾಯ್ಕ, ಮಹೇಶ ನಾಯ್ಕ ಮತ್ತಿತರರು ಸಹಕರಿಸಿದರು. ತರಬೇತಿಯಲ್ಲಿ ತಾಲೂಕಿನ ವಿವಿಧ ಪ್ರದೇಶದಿಂದ 300ಕ್ಕೂ ಅಧಿಕ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.