ಕಲಬುರಗಿ: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಪ್ರವೇಶಕ್ಕಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಲಬುರಗಿಯ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿಯಲ್ಲಿ ನಡೆಯುವ ಶರಣಬಸವೇಶ್ವರ ವಸತಿ ಕಾಲೇಜಿನ(ಎಸ್ ಬಿಆರ್) ವಿದ್ಯಾರ್ಥಿ ಮನೋಜ ರಾಠೊಡ ರಾಷ್ಟಿಯ ಮಟ್ಟದಲ್ಲಿ 166ನೇ ಸ್ಥಾನ ಗಳಿಸುವ ಮೂಲಕ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿಯೇ ಹೊಸ ದಾಖಲೆ ಬರೆದಿದ್ದಾರೆ.
ಇದರೊಂದಿಗೆ ಎಸ್‌ಬಿಆರ್ ವಿದ್ಯಾರ್ಥಿ ಮನೋಜ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಜಾರಿಗೆ ತಂದಿರುವ ಕಿಶೋರ ವೈಜ್ಞಾನಿಕ ಪ್ರೋತ್ಸಾಹಧನ ಯೋಜನೆ(ಡಿಎಸ್‌ಟಿ) (ಕೆವಿಪಿವೈ) ಅಡಿ ಸ್ಕಾಲರ್‌ಶಿಪ್ ಪಡೆಯಲು ಅರ್ಹತೆ ಪಡೆದುಕೊಂಡವರ ಪಟ್ಟಿಯಲ್ಲಿ ಸ್ಥಾನ ಪಡೆದಂತಾಗಿದೆ.
ಈ ವರೆಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿಈ ಭಾಗದ ವಿದ್ಯಾರ್ಥಿಗಳು ರ್‍ಯಾಂಕಿಂಗ್ ಶ್ರೇಣಿ ಪಡೆದಿರಲಿಲ್ಲ. ಮಹತ್ವದ ಸ್ಕಾಲರ್‌ಶಿಪ್ ಯೋಜನೆಗೆ ಆಯ್ಕೆಯಾಗಿರುವ ಎಸ್‌ಬಿಆರ್ ವಿದ್ಯಾರ್ಥಿಗೆ ಮುಂದಿನ ದಿನಗಳಲ್ಲಿ ಐಐಎಸ್‌ಯಲ್ಲಿ ಉನ್ನತ ಶಿಕ್ಷಣದ ಕಲಿಕೆ ಜತೆ, ವಿಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ, ಸಂಶೋಧನಾ ಕಾರ್ಯ ಕೈಗೊಳ್ಳಲು ಅವಕಾಶವಿರುತ್ತದೆ.
ಉನ್ನತ ಶಿಕ್ಷಣ ಹಾಗೂ ಪಿಎಚ್‌ಡಿ ಇನ್ನಿತರ ಕಲಿಕೆಗಾಗಿ 5 ವರ್ಷಗಳ ಕಾಲ ಮನೋಜ ರಾಠೊಡಗೆ ಪ್ರತಿ ತಿಂಗಳು ನಿಯಮಿತವಾಗಿ ವಿದ್ಯಾರ್ಥಿ ವೇತನ ನೀಡಲಿದೆ. ವಿದ್ಯಾರ್ಥಿ ವೇತನ ಆತನ ಸಂಪೂರ್ಣ ಕಲಿಕಾ ವೆಚ್ಚವನ್ನು ಭರಿಸುವಷ್ಟು ಕೆವಿಪಿವೈ ಯೋಜನೆಯಿಂದ ನೀಡಲಾಗುತ್ತದೆ. ಇಂತಹ ಮಹತ್ವದ ಯೋಜನೆಗೆ ಆಯ್ಕೆಯಾಗುವ ಮೂಲಕ ಹಿಂದುಳಿದ ಪ್ರದೇಶದಲ್ಲಿ ಪ್ರತಿಭೆಗೆ ಕೊರತೆಯಿಲ್ಲ.
ಅತ್ಯುನ್ನತ ದರ್ಜೆಯ ಶಿಕ್ಷಣವನ್ನು ಎಸ್‌ಬಿಆರ್ ನೀಡುತ್ತದೆ ಎಂಬುದನ್ನು ಐಐಎಸ್‌ಸಿಗೆ ಆಯ್ಕೆಯಾಗುವ ಮೂಲಕ ಸಾಬೀತುಪಡಿಸಿದ್ದಾನೆ ಎಂದು ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳು ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪೂಜ್ಯ ಡಾ| ಶರಣಬಸವಪ್ಪ ಅಪ್ಪಾಜಿಯವರು ವಿದ್ಯಾರ್ಥಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.