ಕುಂದಾಪುರ: ರಾಜ್ಯದ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿರುವ ಸಾವಿರಾರು ಮಂದಿ ಜೆಇಇ, ನೀಟ್, ಸಿಇಟಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ದೂರ ಉಳಿಯುತ್ತಿದ್ದಾರೆ. ಪರಿಣಾಮವಾಗಿ ಸರಕಾರಿ ಕೋಟಾದಡಿ ಎಂಜಿನಿಯರಿಂಗ್, ಮೆಡಿಕಲ್ ಓದುವ ಅರ್ಹತೆಯುಳ್ಳ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತರು ಮುನ್ನಲೆಗೆ ಬರದಂತಾಗಿದೆ.
ಶಾಲಾ, ಕಾಲೇಜುಗಳು :
ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯು ಕೇಂದ್ರದ ಜವಾಹರ್ ನವೋದಯ ಮಾದರಿ ಶಾಲೆ ಮಾದರಿಯಲ್ಲಿ 1996-97ರಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಆರಂಭಿಸಿತು. 385 ಮೊರಾರ್ಜಿ ದೇಸಾಯಿ, 157 ಕಿತ್ತೂರು ರಾಣಿ ಚೆನ್ನಮ್ಮ, 12 ಏಕಲವ್ಯ ಮಾದರಿ ಶಾಲೆ, 15 ಅಟಲ್ ಬಿಹಾರಿ ವಾಜಪೇಯಿ ಶಾಲೆ, 96 ಶ್ರೀಮತಿ ಇಂದಿರಾ ಗಾಂಧಿ , 96 ಡಾ| ಬಿ.ಆರ್. ಅಂಬೇಡ್ಕರ್, 4 ಹುತಾತ್ಮ ವಸತಿ ಶಾಲೆಗಳು, 4 ಎಸ್‌ಸಿ/ಎಸ್‌ಟಿ ಪ್ರತಿಭಾವಂತ ವಿದ್ಯಾರ್ಥಿನಿಯರ ವಸತಿ ಶಾಲೆ, 1 ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಸತಿ ಶಾಲೆ ಸೇರಿ ಒಟ್ಟು 826 ಶಾಲೆಗಳಿವೆ. ಈಗ ಹೊಸದಾಗಿ 4 ನಾರಾಯಣ ಗುರು ವಸತಿ ಶಾಲೆಗಳೂ ಸೇರ್ಪಡೆಯಾಗಿವೆ. ಇದಲ್ಲದೇ ರಾಜ್ಯದಲ್ಲಿ 26 ಪದವಿ ಪೂರ್ವ ಕಾಲೇಜುಗಳಿವೆ. ಇವುಗಳಲ್ಲದೇ ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯಡಿ 95 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, 8 ಸರಕಾರಿ ಮುಸ್ಲಿಂ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತೀ ಶಾಲೆಗಳಲ್ಲಿ 250, ಕಾಲೇಜುಗಳಲ್ಲಿ 160 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ.
ವೃತ್ತಿಪರ ಶಿಕ್ಷಣಕ್ಕೆ ಅವಶ್ಯ:
ವೃತ್ತಿಪರ ಶಿಕ್ಷಣ ಪಡೆಯಲು ಪ್ರಥಮ ಪಿಯುಸಿ ಯಿಂದಲೇ ಮಾರ್ಗದರ್ಶನದ ಅಗತ್ಯವಿದೆ. ದ.ಕ.ದಲ್ಲಿ ಶಾಲಾ ಮುಖ್ಯಸ್ಥರ ಆಸಕ್ತಿಯಿಂದ, ಪೋಷಕರ ಸಹಕಾರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ. ಸರಕಾರವೇ ಇದಕ್ಕೆ ವ್ಯವಸ್ಥೆ ಮಾಡಿದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಕುರಿತಾದ ಪ್ರಸ್ತಾವನೆ ನನೆಗುದಿಯಲ್ಲೇ ಇದೆ.
ವೇತನ: ಪ್ರಸ್ತುತ ಗೌರವ ಶಿಕ್ಷಕರನ್ನು ಬೋಧನೆಗೆ ಬಳಸ ಲಾಗುತ್ತಿದ್ದು, ಶಿಕ್ಷಕರಿಗೆ ಮಾಸಿಕ 10 ಸಾವಿರ ರೂ., ಉಪನ್ಯಾಸಕರಿಗೆ 12 ಸಾವಿರ ರೂ. ನೀಡಲಾಗುತ್ತದೆ. ನರೇಗಾದಲ್ಲಿ 309 ರೂ. ನೀಡುವ ಸರಕಾರ ಶಿಕ್ಷಕರು, ಉಪನ್ಯಾಸಕರಿಗೆ ದಿನಕ್ಕೆ 333 ರೂ., 400 ರೂ. ವೇತನ ನೀಡುತ್ತಿದೆ.
ತಳವರ್ಗದ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳಿಗೆ ನಮ್ಮ ಸರಕಾರದಲ್ಲಿ ಸದಾ ತೆರೆದ ಬಾಗಿಲು. ಮೊರಾರ್ಜಿ ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಇಲಾಖೆ ಸಚಿವರು
–ಲಕ್ಷ್ಮೀ ಮಚ್ಚಿನ