Advertisement

ಟಿಕೆಟ್‌ ಕೊಟ್ಟರೆ ಸ್ಪರ್ಧೆ, ಇಲ್ಲದಿದ್ದರೆ ಇಲ್ಲ; ವಿ. ಸೋಮಣ್ಣ ಹೊಸ ವರಸೆ

11:42 PM Mar 13, 2023 | Team Udayavani |

ಬೆಂಗಳೂರು: ಬಿಜೆಪಿಯಲ್ಲಿ ಟಿಕೆಟ್‌ ಕೊಟ್ಟರೆ ಚುನಾವಣೆಗೆ ಸ್ಪರ್ಧಿಸುತ್ತೇನೆ. ಇಲ್ಲ ಅಂದರೆ ಇಲ್ಲ. ನಾನು ಯಾವತ್ತಾದರೂ ನನ್ನ ಮಗನಿಗೆ ಟಿಕೆಟ್‌ ಕೇಳಿದ್ದೇನಾ? ಎಂದು ಹೇಳುವ ಮೂಲಕ ವಸತಿ ಸಚಿವ ಸೋಮಣ್ಣ ಅವರು ಹೊಸ ವರಸೆ ತೆಗೆದಿದ್ದಾರೆ. ಜತೆಗೆ ಪಕ್ಷದಲ್ಲೇ ಇರುತ್ತೇನೆ ಅಥವಾ ಪಕ್ಷ ತ್ಯಜಿಸುವೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಹೇಳದಿರುವುದರಿಂದ ಗೊಂದಲ ಮುಂದುವರಿದಿದೆ.

Advertisement

ಸಿಎಂ ಬಸವರಾಜ ಬೊಮ್ಮಾಯಿ ಜತೆ ನಡೆದ ಮೂರು ಸುತ್ತಿನ ಸಂಧಾನ ಸಭೆಯ ಬಳಿಕವೂ ಸೋಮಣ್ಣ ಅಸಮಾಧಾನ ಇನ್ನೂ ಉಳಿದುಕೊಂಡಿದ್ದು, ಟಿಕೆಟ್‌ ಕೊಟ್ಟರೆ ಸ್ಪರ್ಧಿಸುತ್ತೇನೆ ಎನ್ನುವ ಮೂಲಕ ಹೊಸ ವರಸೆ ಆರಂಭಿಸಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಇವೆಲ್ಲ ಇರುತ್ತದೆ. ಎಲ್ಲಿ ಏನು ಹೇಳಬೇಕೋ ಹೇಳಿದ್ದೇನೆ. ಕವಲುದಾರಿಗಳು ಇರುತ್ತವೆ. ನಾನೇನೂ ಸನ್ಯಾಸಿಯಲ್ಲ. ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ನಾವೆಲ್ಲರೂ ಸ್ನೇಹಿತರು. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರ ಕೆಲಸ ಅವರು ಮಾಡುತ್ತಾರೆ, ನನ್ನ ಕೆಲಸ ನಾನು ಮಾಡುತ್ತೇನೆ. ನನಗೆ ಅಸಮಾಧಾನ ಇದೆಯೆಂದು ನಾನೆಲ್ಲೂ ಹೇಳಿಲ್ಲ ಎಂದರು.

ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು. ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂದು ಅವರು ಬೇಸರಗೊಳ್ಳುವುದು ಬೇಡ. ಅವರು ಪಕ್ಷಕ್ಕೆ ಬಂದಾಗಿನಿಂದಲೂ ಹಲವು ಜವಾಬ್ದಾರಿಗಳನ್ನು ಕೊಡಲಾಗಿದೆ. ಬಿಜೆಪಿಯ ಹಿರಿಯರಿಗೆ ಸಿಗದ ಸ್ಥಾನಗಳು ಸೋಮಣ್ಣ ಅವರಿಗೆ ಸಿಕ್ಕಿದೆ. ಅವರು ಶಾಸಕರಾಗಿ ಆಯ್ಕೆಗೊಳ್ಳದೇ ಇದ್ದಾಗ ಪರಿಷತ್‌ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನದಲ್ಲಿ ಮುಂದುವರಿಸಲಾಗಿತ್ತು.
– ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಸಚಿವ ಸೋಮಣ್ಣ ಬಿಜೆಪಿ ಬಿಡಲ್ಲ. ನಮ್ಮ ಜತೆಗೆ ಇರುತ್ತಾರೆ. ನಾನು ಅವರು ಹಳೆಯ ಸ್ನೇಹಿತರು. ಅವರು ಎಲ್ಲಿಯೂ ಹೋಗುವುದಿಲ್ಲ. ಈ ಕುರಿತು ಹುಬ್ಬಳ್ಳಿಯಲ್ಲಿ ಯಾವುದೇ ಮಾತುಕತೆ ನಡೆದಿಲ್ಲ.
– ಬಸವರಾಜ ಬೊಮ್ಮಾಯಿ, ಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next